ಕೊಡಗಿನ ಪುಣ್ಯ ಕ್ಷೇತ್ರಗಳಾದ ತಲಕಾವೇರಿ ಮತ್ತು ಭಾಗಮಂಡಲ ದೇವಾಲಯಗಳಿಗೆ ಮೂಲಭೂತ ಸೌಕರ್ಯ ಮತ್ತು ಅಭಿವೃದ್ದಿ
ಕಾಮಗಾರಿಗಳನ್ನು ನಡೆಸಲು ವಿಶೇಷ ಅನುದಾನ ಒದಗಿಸುವಂತೆ ಕೊಡಗು ಜಿಲ್ಲಾಧಿಕಾರಿಗಳಿಂದ ಪ್ರಸ್ತಾವನೆ ಬಂದರೆ ಅನುದಾನ ಮಂಜೂರಾತಿಗಾಗಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.
ತಲಕಾವೇರಿ ಮತ್ತು ಭಾಗಮಂಡಲ ದೇವಾಲಯಗಳಿಗೆ ಮೂಲ ಸೌಕರ್ಯ ಹಾಗೂ ಅಭಿವೃದ್ದಿ ಕಾಮಗಾರಿ ಮತ್ತು ಪ್ರಸಕ್ತ ವರ್ಷ ನೀಡಿರುವ ಅನುದಾನದ ಬಗ್ಗೆ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರು ಕೇಳಿದ ಪ್ರಶ್ನೆಗೆ ಸದನದಲ್ಲಿ ಅವರು ಉತ್ತರಿಸಿದರು.
2021-22ರ ಸಾಲಿನಲ್ಲಿ ತುಲಾ ಸಂಕ್ರಮಣ ಜಾತ್ರೆಗೆ ಸಾಮಾನ್ಯ ಸಂಗ್ರಹಣಾ ನಿಧಿಯಿಂದ 20 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. 2020-21ನೇ ಸಾಲಿನಲ್ಲಿ ಬೆಂಗಳೂರು ಮಹಾನಗರ ಪಾಲಿಕೆಯು 1 ಕೋಟಿ ಹಣ ಬಿಡುಗಡೆ ಮಾಡಿದ್ದು, ಈ ಅನುದಾನದಿಂದ ಕಾಮಗಾರಿ ಕೈಗೊಳ್ಳುವ ಕುರಿತು ನೀಲ ನಕ್ಷೆ ತಯಾರಿಸಿ ಕೊಡುವಂತೆ ಕೊಡಗು ಜಿಲ್ಲಾಧಿಕಾರಿಗಳು ಸರಕಾರದ ಪ್ರಧಾನ ಮುಖ್ಯ ವಾಸ್ತುಶಿಲ್ಪಿಯವರಿಗೆ ಪತ್ರ ಬರೆದಿದ್ದಾರೆ. ನೀಲ ನಕ್ಷೆ ಸ್ವೀಕೃತವಾದ ನಂತರ ಉದ್ದೇಶಿತ ವಸತಿ ಗೃಹ ಕಟ್ಟಡದ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಶಶಿಕಲಾ ಜೊಲ್ಲೆ ಮಾಹಿತಿ ನೀಡಿದ್ದಾರೆ