Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸಚಿವ ನಾಗೇಂದ್ರ ರಾಜೀನಾಮೆ, ಕೇಂದ್ರ ಏಜೆನ್ಸಿಯಿಂದ ತನಿಖೆಗೆ ಗೋವಿಂದ ಕಾರಜೋಳ ಆಗ್ರಹ

Karnataka BJP

Krishnaveni K

ಬೆಂಗಳೂರು , ಬುಧವಾರ, 29 ಮೇ 2024 (16:59 IST)
ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿ ಇಲಾಖಾ ಸಚಿವ ನಾಗೇಂದ್ರ ಅವರು ಕೂಡಲೇ ರಾಜೀನಾಮೆ ಕೊಟ್ಟು ನಿಷ್ಪಕ್ಷಪಾತ ತನಿಖೆಗೆ ಅವಕಾಶ ಮಾಡಿಕೊಡಬೇಕು ಎಂದು ಮಾಜಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಆಗ್ರಹಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರಕಾರದ ತನಿಖಾ ಸಂಸ್ಥೆಗಳಿಂದ ಇದರ ಸಮಗ್ರ ನಿಷ್ಪಕ್ಷಪಾತ ತನಿಖೆ ಮಾಡಲು ಅಸಾಧ್ಯ. ಆದ್ದರಿಂದ ಕೇಂದ್ರ ಸರಕಾರದ ಏಜೆನ್ಸಿಗಳ ಮೂಲಕ ತನಿಖೆ ನಡೆಸಿ ಎಂದು ಒತ್ತಾಯಿಸಿದರು. ಆತ್ಮಹತ್ಯೆ ಮಾಡಿಕೊಂಡ ಚಂದ್ರಶೇಖರ್ ಅವರು ಮಂತ್ರಿಗಳ ಮೌಖಿಕ ಆದೇಶದನ್ವಯ ಹಣ ವರ್ಗಾವಣೆ ಮಾಡಿದ್ದಾಗಿ ಬರೆದಿದ್ದಾರೆ. ಹಾಗಾದರೆ ಎಫ್‍ಐಆರ್‍ನಲ್ಲಿ ಸಚಿವರ ಹೆಸರು ಯಾಕೆ ಬಂದಿಲ್ಲ ಎಂದು ಪ್ರಶ್ನಿಸಿದರು. ಇದು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ ಎಂದರು.

ಸರಕಾರದ ಅಧೀನ ಸಂಸ್ಥೆಯಾದ ಸಿಐಡಿಯವರು ಮುಖ್ಯಮಂತ್ರಿಗಳು, ಸಚಿವರ ಬಗ್ಗೆ ತನಿಖೆ ಮಾಡಲು ಎಷ್ಟರಮಟ್ಟಿಗೆ ಸಾಧ್ಯ ಎಂದ ಅವರು, ನೈತಿಕತೆ ಇದ್ದರೆ ಸಚಿವರು ರಾಜೀನಾಮೆ ಕೊಡಬೇಕಿತ್ತು ಎಂದು ತಿಳಿಸಿದರು. ಬ್ಯಾಂಕ್ ಖಾತೆಯು ಎಂ.ಡಿ. ಮತ್ತು ಅಕೌಂಟ್ಸ್ ಅಧಿಕಾರಿಯ ಜಂಟಿ ಖಾತೆಯಾಗಿರುತ್ತದೆ. ಮಾರ್ಚ್‍ನಲ್ಲಿ ಹಣ ವರ್ಗಾವಣೆ ಆಗಿದೆ. ಮಾರ್ಚ್ 4ರಂದು 25 ಕೋಟಿ, 6ರಂದು 25 ಕೋಟಿ, ಮಾರ್ಚ್ 21ರಂದು 44 ಕೋಟಿ ವರ್ಗಾವಣೆ ಆಗಿದೆ. ರಾಜ್ಯ ಹುಜೂರ್ ಖಜಾನೆಯಿಂದ 43.33 ಕೋಟಿ ವರ್ಗಾವಣೆ ಆಗಿದೆ. ಬಳಿಕ ಮೇ 21ರಂದು 50 ಕೋಟಿ ವರ್ಗಾವಣೆ ಆಗಿದೆ ಎಂದು ವಿವರಿಸಿದರು.

ಜಂಟಿ ಖಾತೆ ಇದ್ದಾಗ ಹೇಗೆ ವರ್ಗಾವಣೆ ಆಗಿದೆ? ಬ್ಯಾಂಕಿನ ಪ್ರತಿ ತಿಂಗಳ ವಿವರ- ಹುಜೂರ್ ಖಜಾನೆಯ ವಿವರವನ್ನು ಪುನರ್ ಪರಿಶೀಲಿಸಲಿಲ್ಲವೇ? ಎಂದ ಅವರು, ಮಾರ್ಚ್ 31ರಂದು ಹಣಕಾಸು ವರ್ಷ ಮುಕ್ತಾಯ ಆದ ಬಳಿಕ ಎಂ.ಡಿ. ಮತ್ತು ಇಲಾಖೆಯ ಸರಕಾರದ ಮಟ್ಟದ ಅಧಿಕಾರಿಗಳು ಅದನ್ನು ಪರಿಶೀಲಿಸಬೇಕಿತ್ತು. ಹಣ ಖರ್ಚಾದ ಕುರಿತು ಪರಿಶೀಲನಾ ಸಭೆ ಮಾಡಿಲ್ಲವೇ? ಸಭೆ ಮಾಡಿಲ್ಲವೆಂದಾದರೆ ಸರಕಾರವೇ ಇದರಲ್ಲಿ ಶಾಮೀಲಾಗಿರುವುದೇ ಕಾರಣ; ಸರಕಾರವು ಜವಾಬ್ದಾರಿಯಿಂದ ನುಣುಚಿಕೊಳ್ಳಲು ಇದನ್ನು ಮುಚ್ಚಿಟ್ಟಿದ್ದಾರೆ ಎಂದು ಆರೋಪಿಸಿದರು.
 
ನಿಗಮದಲ್ಲಿ ನಡೆದಿರುವುದು ಹಗಲುದರೋಡೆ..
ಬಹುಶಃ ಇತ್ತೀಚಿನ ವರ್ಷಗಳಲ್ಲಿ ಸರಕಾರದ ಖಜಾನೆಯನ್ನೇ ಲೂಟಿ ಮಾಡಿದ ದೊಡ್ಡ ಹಗರಣವಿದು. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವುದು ಹಗಲುದರೋಡೆ. 187 ಕೋಟಿ ರೂ. ಹಗರಣದ ವಿಚಾರ ಗೊತ್ತಿದ್ದೂ ಗೊತ್ತಿಲ್ಲದಂತೆ ಕಣ್ಮುಚ್ಚಿ ಕುಳಿತ ಸರಕಾರವಿದು. ಹಗರಣದಲ್ಲಿ ಸಂಪೂರ್ಣವಾಗಿ ಭಾಗಿ ಆಗಿದ್ದರಿಂದಲೇ ಕಣ್ಮುಚ್ಚಿ ಕುಳಿತಿದೆ ಎಂದು ಆರೋಪಿಸಿದರು. ನಿರಪರಾಧಿ ಕೆ.ಎಸ್.ಈಶ್ವರಪ್ಪನವರನ್ನು ಬಲಿ ಪಡೆದಿರಿ; ಅವತ್ತು ನೀವು ಪ್ರತಿಪಕ್ಷದಲ್ಲಿ ಇದ್ದಾಗ ಯಾವ ರೀತಿ ಮಾತಾಡಿದ್ದೀರಿ ಎಂಬುದನ್ನು ನೆನಪಿಸಿಕೊಳ್ಳಿ ಎಂದು ಗೋವಿಂದ ಕಾರಜೋಳ ಅವರು ಮುಖ್ಯಮಂತ್ರಿಗಳನ್ನು ಆಗ್ರಹಿಸಿದರು.
 
ಮೃತರ ಬಳಿ ಇದ್ದ ಪೆನ್ ಡ್ರೈವ್ ಮತ್ತು ಲ್ಯಾಪ್ ಟಾಪಿನಲ್ಲಿದ್ದ ಮಾಹಿತಿಯನ್ನು ಸಾರ್ವಜನಿಕರ ಮುಂದಿಡಬೇಕು. ಸತ್ಯವಂತರು ಎಂದು ಹೇಳಿಕೊಳ್ಳುವ ಇವರು ತನಿಖೆಗೆ ಮುಂದಾಗಬೇಕು ಎಂದು ತಿಳಿಸಿದರು. ಎಸ್‍ಸಿ, ಎಸ್‍ಟಿಗಳಿಗೆ ಮೀಸಲಿಟ್ಟ 24 ಸಾವಿರ ಕೋಟಿ ಹಣವನ್ನು ಅನ್ಯ ಉದ್ದೇಶಕ್ಕೆ ದುರ್ಬಳಕೆ ಮಾಡಿಕೊಂಡಿದ್ದಾರೆ. ಇದರ ಜವಾಬ್ದಾರಿಯನ್ನು ಮುಖ್ಯಮಂತ್ರಿಗಳೇ ಹೊರಬೇಕು ಎಂದು ಒತ್ತಾಯಿಸಿದರು. ಈ ಹಣವನ್ನು ವಾಪಸ್ ಇಲಾಖೆಗೆ ಕೊಡಬೇಕು ಎಂದೂ ಅವರು ಆಗ್ರಹಿಸಿದರು.
ಈ ವಿಷಯದಲ್ಲಿ ತೀವ್ರ ಹೋರಾಟ ಮಾಡುವುದಾಗಿ ಅವರು ತಿಳಿಸಿದರು. ಹೋರಾಟದ ರೂಪುರೇಷೆಯನ್ನು ಶೀಘ್ರವೇ ಪಕ್ಷ ಪ್ರಕಟಿಸಲಿದೆ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು. 
 
 
 

Share this Story:

Follow Webdunia kannada

ಮುಂದಿನ ಸುದ್ದಿ

ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಬಳ್ಳಾರಿಯಲ್ಲಿ ಬಿಜೆಪಿ ಬೃಹತ್ ಪ್ರತಿಭಟನೆ