46 ಲಕ್ಷ ರೂ ಮೌಲ್ಯದ ಸಂಚಾರಿ ರಕ್ತಸಂಗ್ರಹಣ ವಾಹನವನ್ನು ರೋಟರಿ ಬೆಂಗಳೂರು ದಕ್ಷಿಣ ಸಂಸ್ಥೆಯು ಭಾರತೀಯ ರೆಡ್ ಕ್ರಾಸ್ ಸಂಸ್ಥೆಗೆ ದಾನವಾಗಿ ನೀಡಿದೆ.
ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯಪಾಲ ಗೆಹ್ಲೋಟ್ ರೆಡ್ ಕ್ರಾಸ್ ಸಂಸ್ಥೆಯು ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯುವ ಅಂತರಾಷ್ಟ್ರೀಯ ಸೇವಾ ಸಂಸ್ಥೆಯಾಗಿದೆ. ಇವರೊಂದಿಗೆ ರೋಟರಿ ಸಂಸ್ಥೆ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದರು.
ಕೋವಿಡ್-19 ಸೋಂಕಿನ ಪರಿಣಾಮ, ಸ್ವಯಂಪ್ರೇರಿತ ರಕ್ತದಾನ ಶಿಬಿರಗಳನ್ನು ಆಯೋಜಿಸುತ್ತಿದ್ದ ಬಹುತೇಕ ಸಂಸ್ಥೆಗಳಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರಗಳು ಇಳಿಮುಖವಾಗಿದೆ. ಸಂಚಾರಿ ರಕ್ತ ಸಂಗ್ರಹಣ ವಾಹನದ ಲಭ್ಯತೆಯೂ ರಕ್ತ ಅಗತ್ಯವಿರುವವರಿಗೆ ರಕ್ತ ಒದಗಿಸುವ ಕಾರ್ಯಕ್ಕೆ ಸಂಜೀವಿನಿಯಾಗಿದೆ ಎಂದು ಹೇಳಿದರು.
ಸಾರ್ವಜನಿಕ ಸ್ಥಳಗಳಲ್ಲಿ ರಕ್ತದ ಅಗತ್ಯತೆಯ ಬಗ್ಗೆ ಅರಿವು ಮೂಡಿಸುವುದು, ರಕ್ತದಾನ ಮಾಡಲು ಪ್ರೇರೇಪಿಸುವುದರ ಮೂಲಕ ರಕ್ತ ಸಂಗ್ರಹಣೆ ಮಾಡುವುದು ಸಂಚಾರಿ ರಕ್ತಸಂಗ್ರಹಣ ವಾಹನದ ಮೂಲ ಉದ್ದೇಶವಾಗಿದೆ. ಏಕಕಾಲದಲ್ಲಿ ನಾಲ್ಕು ಮಂದಿ ರಕ್ತದಾನ ಮಾಡಲು ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಹೊಂದಿರುವುದು ಈ ವಾಹನದ ವಿಶೇಷತೆಯಾಗಿದೆ. ಒಂದು ದಿನದಲ್ಲಿ ಸುಮಾರು 100 ಕ್ಕೂ ಹೆಚ್ಚು ರಕ್ತದ ಯೂನಿಟ್ ಗಳನ್ನು ಸಂಗ್ರಹಿಸುವ ಸಾಮರ್ಥ್ಯವನ್ನು ಈ ವಾಹನವು ಒಳಗೊಂಡಿದೆ ಎಂದರು.
ಕಾರ್ಯಕ್ರಮದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕರ್ನಾಟಕ ರಾಜ್ಯ ಶಾಖೆಯ ಸಭಾಪತಿಗಳಾದ ಎಸ್. ನಾಗಣ್ಣ ಉಪಸಭಾಪತಿಗಳಾದ ಡಾ.ಕುಮಾರ್ ವಿ.ಎಲ್.ಎಸ್., ರಾಜ್ಯಪಾಲರಿಂದ ನಾಮನಿರ್ದೇಶನಗೊಂಡ ಬಾಲಕೃಷ್ಣ ಶೆಟ್ಟಿ ಹಾಗೂ ಪ್ರಧಾನ ಕಾರ್ಯದರ್ಶಿಗಳಾದ ಹೆಚ್.ಎಸ್. ಬಾಲಸುಬ್ರಹ್ಮಣ್ಯ ಉಪಸ್ಥಿತರಿದ್ದರು.
ವಾಹನವನ್ನು ದೇಣಿಗೆಯಾಗಿ ನೀಡಿದ ರೋಟರಿ ಬೆಂಗಳೂರು ದಕ್ಷಿಣ ಸಂಸ್ಥೆಯ ನಿರ್ಗಮಿತ ಜಿಲ್ಲಾ ಗರ್ವನರ್ ವಿ.ಎಲ್. ನಾಗೇಂದ್ರ ಪ್ರಸಾದ್, ನಿರ್ಗಮಿತ ರೋಟರಿ ಜಿಲ್ಲಾ ಅಧ್ಯಕ್ಷರಾದ ಟಿ ಶ್ರೀನಿವಾಸ, ಬಿ.ಆರ್ ಶ್ರೀಧರ್, ಹಾಲಿ ಜಿಲ್ಲಾ ಗರ್ವನರ್ ಫಸಲ್ ಮೊಹಮ್ಮದ್, ನಿರ್ಗಮಿತ ಜಿಲ್ಲಾ ಗರ್ವನರ್ ಕೆ.ಪಿ.ನಾಗೇಶ್ ಮತ್ತು ಶ್ರೀನಿವಾಸಮೂರ್ತಿ ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.