ಬೆಂಗಳೂರು : ಪಠ್ಯ ಪರಿಷ್ಕರಣೆ ಸಂಬಂಧ ಉದ್ಭವಿಸಿರುವ ಎಲ್ಲ ವಿವಾದಗಳಿಗೂ ಶಾಶ್ವತ ತೆರೆ ಎಳೆಯಲು ಹೊಸ ಹೆಜ್ಜೆ ಇಟ್ಟಿರುವ ಶಿಕ್ಷಣ ಇಲಾಖೆಯು ಈಗಿನ ರೋಹಿತ್ ಚಕ್ರತೀರ್ಥ ಸಮಿತಿ,
ಹಿಂದಿನ ಡಾ.ಬರಗೂರು ರಾಮಚಂದ್ರಪ್ಪ ಸಮಿತಿ ಮತ್ತು ಅದಕ್ಕೂ ಮೊದಲ ಮುಡಂಬಡಿತ್ತಾಯ ಸಮಿತಿ ಪರಿಷ್ಕರಿಸಿರುವ ಮೂರೂ ಪ್ರತ್ಯೇಕ ಪಠ್ಯಕ್ರಮವನ್ನು ಸಾರ್ವಜನಿಕರವಾಗಿ ವೆಬ್ಸೈಟ್ನಲ್ಲಿ ಪ್ರಕಟಿಸಿ, ಆಕ್ಷೇಪಣೆಗಳನ್ನು ಆಹ್ವಾನಿಸಲು ನಿರ್ಧರಿಸಿದೆ.
ಮೂರು ಸಮಿತಿಗಳ ಪಠ್ಯವನ್ನು ಯಾರು ಬೇಕಾದರೂ ಓದಿಕೊಂಡು ಅವುಗಳಲ್ಲಿ ಯಾವುದಾದರೂ ವಿಷಯ, ಅಂಶಗಳು ಸರಿಯಿಲ್ಲ, ತಪ್ಪಿದೆ ಅಥವಾ ಯಾವುದೇ ಬದಲಾವಣೆಗಳಾಗಬೇಕಿತ್ತು ಎನಿಸಿದರೆ ಆ ಸಂಬಂಧಿಸಿದ ತಮ್ಮ ಆಕ್ಷೇಪಣೆಗಳನ್ನು ಇಲಾಖೆಗೆ ಸಲ್ಲಿಸಬಹುದು.
ಸಾರ್ವಜನಿಕರಿಂದ ಬರುವ ಆಕ್ಷೇಪಣೆಗಳನ್ನು ನಮ್ಮ ಅಧಿಕಾರಿಗಳು ಪರಿಶೀಲನೆ ನಡೆಸಲಿದ್ದಾರೆ. ಯಾವುದೇ ಆಕ್ಷೇಪಾರ್ಹ ಅಂಶ ನಿಜ ಎಂಬುದು ಇಲಾಖೆಯ ಗಮನಕ್ಕೆ ಬಂದರೆ ಅದನ್ನು ಮುಕ್ತವಾಗಿ ಸ್ವೀಕರಿಸಿ ಪರಿಷ್ಕರಣೆಗೆ ಪರಿಗಣಿಸಲಾಗುವುದು ಎಂದು ಹೇಳಿದರು.