Publish Date: Wed, 12 Apr 2023 (10:29 IST)
Updated Date: Wed, 12 Apr 2023 (11:16 IST)
ಬೆಳಗಾವಿ : ಅಥಣಿ ಕ್ಷೇತ್ರದ ಟಿಕೆಟ್ ಕೈತಪ್ಪಿದ ಬೆನ್ನಲ್ಲೇ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಹಾಗೂ ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ರಾಜೀನಾಮೆ ನೀಡಿದ್ದು ಕಾಂಗ್ರೆಸ್ ಸೇರುವ ಸಾಧ್ಯತೆಯಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಖಂಡಿತವಾಗಿಯೂ ತೀರ್ಮಾನ ಮಾಡಿದ್ದೇನೆ. ಭಿಕ್ಷೆ ಪಾತ್ರೆ ಇಟ್ಟುಕೊಂಡು ತಿರುಗುವನು ನಾನಲ್ಲ. ನಾನು ಸ್ವಾಭಿಮಾನಿ ರಾಜಕಾರಣಿ ಲಜ್ಜೆಗಟ್ಟ ರಾಜಕಾರಣಿ ಅಲ್ಲ. ಅಧಿಕಾರಿದ ಅಮಲಿನಲ್ಲಿ ನಾನಿಲ್ಲ. ಜಿಲ್ಲೆಯಲ್ಲಿ ಯಾರು ಬೆನ್ನಿಗೆ ಚೂರಿ ಹಾಕಿಲ್ಲ ಎಂದು ರಮೇಶ ಜಾರಕಿಹೊಳಿ ವಿರುದ್ಧ ಅಸಮಾಧಾನ ಹೊರಹಾಕಿದರು.
ಕೊನೆ ಗಳಿಗೆವರೆಗೂ ನಿನ್ನ ಜೊತೆ ಇದ್ದೇವೆ ಎಂದು ಬಿಜೆಪಿ ನಾಯಕರು ಹೇಳಿದರು. ನನ್ನ ಜೊತೆಗೆ ಇದ್ದಾರೆ ಎಂದು ಭಾವಿಸಿದ್ದೆ. ಬಿಜೆಪಿ ಮುಖಂಡರು ನಿಷ್ಠಾವಂತ ಕಾರ್ಯಕರ್ತ. ಪಕ್ಷವನ್ನ ತಾಯಿಯ ಸ್ಥಾನದಲ್ಲಿ ಇಟ್ಟಿದ್ದೆ, ವಿಷ ಕೊಡುವುದಿಲ್ಲ ಎಂದಿದ್ದೆ. ಆದರೆ ತಾಯಿ ಕೂಡ ಭ್ರಷ್ಟಳಾಗಿದ್ದಾಳೆ ಎನ್ನುವ ಭಾವನೆ ಬರುತ್ತಿದೆ. ಅವತ್ತಿನ ಬಿಜೆಪಿ ಇಂದಿನ ಬಿಜೆಪಿಗೆ ಬಹಳ ವ್ಯತ್ಯಾಸ ಇದೆ. ತತ್ವ ಸಿದ್ಧಾಂತಗಳು ಬಿಜೆಪಿ ಪಕ್ಷದಲ್ಲಿ ಉಳಿದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.