ಬೆಂಗಳೂರು :ಎರಡು ದಿನಗಳ ಹಿಂದೆ ನಡೆದ ಈ ಘಟನೆಯಲ್ಲಿ, ರಾಜಾಜಿನಗರ ಮೆಟ್ರೋ ನಿಲ್ದಾಣದಲ್ಲಿ ವಯೋವೃದ್ಧ ರೈತರೊಬ್ಬರು ತಮ್ಮ ಮೂಟೆಯ ಸಹಿತ ಮೆಟ್ರೋ ಹತ್ತಲು ಬಂದಿದ್ದರು. ಆದರೆ ಮೆಟ್ರೋ ನಿಲ್ದಾಣದ ಭದ್ರತಾ ಸಿಬ್ಬಂದಿ ಕೊಳಕು ಬಟ್ಟೆ ಧರಿಸಿದ್ದಾರೆಂದು ಕ್ಯಾತೆ ತೆಗೆದು ಒಳಬಿಡಲು ನಿರಾಕರಿಸಿದ್ದರು. ಇದನ್ನು ಸ್ಥಳದಲ್ಲಿದ್ದ ಪ್ರಯಾಣಿಕರು ಮೊಬೈಲ್ ಮೂಲಕ ವಿಡಿಯೋ ಮಾಡಿ ಹರಿಬಿಟ್ಟಿದ್ದರು.
ವೃದ್ಧ ರೈತರೊಬ್ಬರನ್ನು ಕೊಳಕು ಬಟ್ಟೆ ಧರಿಸಿದ್ದಾರೆಂಬ ಕಾರಣಕ್ಕೆ ಪ್ರವೇಶಾವಕಾಶ ನಿರಾಕರಿಸಿ ಅಪಮಾನಗೊಳಿಸಿದ್ದ ಮೆಟ್ರೋ ರೈಲು ಅಧಿಕಾರಿಗಳು ಜನಾಕ್ರೋಶಕ್ಕೆ ಮಣಿದಿದ್ದಾರೆ.ಘಟನೆಗೆ ಸಂಬಂಧಿಸಿದಂತೆ ಮೆಟ್ರೋ ಅಧಿಕಾರಿಗಳು ಕ್ರಮ ಕೈಗೊಂಡಿದ್ದು ಸಂಬಂಧಪಟ್ಟ ಭದ್ರತಾ ಸಿಬ್ಬಂದಿ ಮೇಲ್ವಿಚಾರಕನನ್ನುಸೇವೆಯಿಂದ ವಜಾಗೊಳಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ತೀವ್ರ ಪ್ರತಿರೋಧ ವ್ಯಕ್ತವಾಗಿದ್ದು ಮೆಟ್ರೋ ಸಿಬ್ಬಂದಿ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದರು. ಮಾಧ್ಯಮಗಳಲ್ಲಿ ಈ ವರದಿ ಪ್ರಕಟವಾದ ಬಳಿಕ ಕ್ರಮಕ್ಕೆ ಮುಂದಾಗಿರುವ ಮೆಟ್ರೋ ಸಂಸ್ಥೆಯು ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗೆ ವಿಷಾದ ವ್ಯಕ್ತಪಡಿಸಿದೆ.