ಗಣೇಶ ಮೆರವಣಿಗೆಯಲ್ಲಿ ಪೊಲೀಸರಿಂದ ಲಾಠಿ ಚಾರ್ಜ್ ನಡೆದ ಆರೋಪ ಕೇಳಿಬಂದಿದೆ.
ಹುಬ್ಬಳ್ಳಿಯ ಮಂಟೂರ ರಸ್ತೆಯ ಮ್ಯಾಗನೀಸ್ ಪ್ಲಾಟ್ ಬಳಿ ಲಾಠಿ ಚಾರ್ಜ್ ನಡೆಸಲಾಗಿದೆ. ಒಂದೂವರೆ ಘಂಟೆಯಿಂದ ಡಿಜೆ ಸೌಂಡ್ ಹಚ್ಚಿಕೊಂಡು ನಿಂತಿದ್ದ ಗಣೇಶೋತ್ಸವ ಮಂಡಳಿಯವರಿಗೆ ಮುಂದೆ ಹೋಗಿ ಹೋಗಿ ಎಂದು ಪೊಲೀಸರು ಮನವಿ ಮಾಡಿದ್ದಾರೆ. ಆದರೆ ಪೊಲೀಸರ ಮನವಿಗೂ ಮಣಿಯದ ಮಂಡಳಿಯವರು ಮೆರವಣಿಗೆ ಮೂಲಕ ಗಣಪತಿಯನ್ನು ಮಂಟಪಕ್ಕೆ ಕರೆದೊಯ್ಯುತ್ತಿದ್ದರು.
ಮಂಟೂರ ರಸ್ತೆಯ ಮ್ಯಾಗನೀಸ್ ಪ್ಲಾಟ್ ಗೆ ತಗೆದುಕೊಂಡು ಹೋಗಲಾಗುತ್ತಿದ್ದ ವೇಳೆ, ಡಿಜೆ ಅಬ್ಬರದಿಂದ ಆಕ್ರೋಶಿತರಾದ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ ಪೊಲೀಸರ ಲಾಠಿ ಚಾರ್ಜ್ ಖಂಡಿಸಿ ಪ್ರತಿಭಟನೆಯನ್ನು ನಡೆಸಲಾಯಿತು. ಮೆರವಣಿಗೆ ಅರ್ಧಕ್ಕೆ ನಿಲ್ಲಿಸಿ ಪ್ರತಿಭಟನೆ ನಡೆಸಿದರು.
ಹೀಗಾಗಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಕೊನೆಗೆ ಹೆಚ್ಚಿನ ಪೊಲೀಸ್ ಪಡೆ ಆಗಮನದೊಂದಿಗೆ ಪರಿಸ್ಥಿತಿ ಶಾಂತಗೊಂಡಿತು.