ಮಾರಣಾಂತಿಕ ಮಹಾಮಾರಿ ಶಂಕಿತ ನೀಫಾ ವೈರಸ್ ಗದಗ ಜಿಲ್ಲೆಗೂ ಕಾಲಿಟ್ಟಿದೆ ಎನ್ನಲಾಗುತ್ತಿದೆ. ಗದಗ ಜಿಲ್ಲೆ ರೋಣ ತಾಲೂಕಿನ ವ್ಯಕ್ತಿಯೋರ್ವನಿಗೆ ನಿಫಾ ವೈರಸ್ ಇದೆ ಎಂದು ಶಂಕಿಸಲಾಗಿದೆ.
ಸೋಂಕಿತ ವ್ಯಕ್ತಿಗೆ ಗದಗ ಜಿಮ್ಸ್ ಆಸ್ಪತ್ರೆಯ ತೀವ್ರ ನಿಗಾ ವಿಶೇಷ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಈ ವ್ಯಕ್ತಿ ಕೆಲ ತಿಂಗಳ ಕಾಲ ಕೇರಳದ ಕ್ಯಾಲಿಕಟ್ ಸಮೀಪದಲ್ಲಿ ಕೆಲಸದಲ್ಲಿದ್ದರು. ಇತ್ತೀಚೆಗೆ ಗದಗ ಜಿಲ್ಲೆಯ ತವರೂರಿಗೆ ಮರಳಿದಾಗ ಕಳೆದ ಒಂದೆರಡು ವಾರಗಳಿಂದ ಜ್ವರ, ತಲೆನೋವು, ವಾಂತಿ, ಕೆಮ್ಮು, ಸುಸ್ತು ಹೀಗೆ ನಿಫಾ ವೈರಸ್‌ನ ಲಕ್ಷಣಗಳು ಈ ವ್ಯಕ್ತಿಗೆ ಗೋಚರವಾಗಿವೆ.
ಮುಂಜಾಗ್ರತಾ ಕ್ರಮವಾಗಿ ಗದಗ ಜಿಮ್ಸ್ ವೈದ್ಯರು ತಪಾಸಣೆಗೊಳಪಡಿಸಿದ್ದಾರೆ. ಈ ಹಿನ್ನಲೆಯಲ್ಲಿ ಶಂಕಿತ ವ್ಯಕ್ತಿಯ ರಕ್ತದ ಮಾದರಿಯನ್ನು ಪುಣೆಯ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ರಕ್ತದ ಮಾದರಿ ಸಂಗ್ರಹಿಸಿ, ಪುಣೆಯ ಎನ್‌ಐವಿ ಲ್ಯಾಬ್‌ಗೆ ರಕ್ತ ಪರೀಕ್ಷೆಗಾಗಿ ರವಾನಿಸಿದ್ದಾರೆ.
48 ಗಂಟೆಗಳಲ್ಲಿಪ್ರಯೋಗಾಲಯದ ವರದಿ ಬರಲಿದ್ದು, ಆನಂತರ ಹೆಚ್ಚಿನ ಚಿಕಿತ್ಸೆ ನೀಡುವುದಾಗಿ ಜಿಮ್ಸ್ ಆಡಳಿತ ವೈದ್ಯಾಧಿಕಾರಿ ಎ.ಬಿ ಪಾಟೀಲ್ ಮಾದ್ಯಮದವರಿಗೆ ಸ್ಪಷ್ಟನೆ ನೀಡಿದ್ದಾರೆ. ಗದಗ ಜಿಲ್ಲೆಯಲ್ಲೂ ನಿಫಾ ವೈರಸ್ ಭಯ ಕಾಡತೊಡಗಿದ್ದು, ಜಿಲ್ಲೆಯ ಜನರಲ್ಲಿ ಮತ್ತಷ್ಟು ಆತಂಕವನ್ನು ಮೂಡಿಸಿದೆ.