ಮೈಸೂರು: ರಾಜ್ಯದಲ್ಲಿ ಸಿಎಂ ಬದಲಾವಣೆ ಬಗ್ಗೆ ಮಾತುಗಳು ಕೇಳಿಬರುತ್ತಿರುವ ಬೆನ್ನಲ್ಲೇ ಮೈಸೂರಿನಲ್ಲಿ ದಲಿತ ನಾಯಕರು ಸಭೆ ನಡೆಸಿದ್ದು ಕುತೂಹಲಕ್ಕೆ ಕಾರಣವಾಗಿದೆ. ಆದರೆ ಊಟಕ್ಕಾಗಿ ಸೇರಿದ್ದೆವಷ್ಟೇ ಎಂದು ಜಿ ಪರಮೇಶ್ವರ್ ಹೇಳಿದ್ದಾರೆ.
ಮೈಸೂರಿನಲ್ಲಿ ಜಿ ಪರಮೇಶ್ವರ್, ಸತೀಶ್ ಜಾರಕಿಹೊಳಿ ಸೇರಿದಂತೆ ಪ್ರಮುಖ ನಾಯಕರು ಚರ್ಚೆ ನಡೆಸಿದ್ದಾರೆ. ಇತ್ತೀಚೆಗೆ ಹೈಕಮಾಂಡ್ ಭೇಟಿ ಮಾಡಿ ಬಂದಿದ್ದ ಸತೀಶ್ ಜಾರಕಿಹೊಳಿ ದಲಿತ ನಾಯಕರೊಂದಿಗೆ ಪದೇ ಪದೇ ಸಭೆ ನಡೆಸುತ್ತಿರುವುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.
ಇದರ ನಡುವೆಯೇ ಸಿದ್ದರಾಮಯ್ಯನೇ ಸಿಎಂ ಎಂದು ಸ್ವತಃ ಸತೀಶ್ ಜಾರಕಿಹೊಳಿಯೇ ಹೇಳಿದರೂ ಒಳಗೊಳಗೇ ಸಿದ್ದರಾಮಯ್ಯ ರಾಜೀನಾಮೆ ನೀಡಿದರೆ ದಲಿತ ಸಿಎಂ ಬೇಡಿಕೆ ಮುಂದಿಡಲು ಈ ನಾಯಕರು ತಯಾರಿ ನಡೆಸಿದ್ದಾರೆ ಎನ್ನಲಾಗಿದೆ. ಆ ಕಾರಣಕ್ಕಾಗಿ ಜಿ ಪರಮೇಶ್ವರ್ ಮತ್ತು ಸತೀಶ್ ಜಾರಕಿಹೊಳಿ ನಡುವೆ ಸಿಎಂ ಸ್ಥಾನಕ್ಕಾಗಿ ಮಾತುಕತೆಯೂ ನಡೆದಿದೆ ಎನ್ನಲಾಗಿದೆ.
ಈ ನಡುವೆ ನಿನ್ನೆ ಮೈಸೂರಿನಲ್ಲಿ ಡಿನ್ನರ್ ಪಾರ್ಟಿ ಏರ್ಪಾಡಾದ ಬಗ್ಗೆ ಪ್ರತಿಕ್ರಿಯಿಸಿರುವ ಜಿ ಪರಮೇಶ್ವರ್, ಎಲ್ಲರೂ ಊಟಕ್ಕೆ ಕರೆದಿದ್ದರು. ಊಟಕ್ಕಾಗಿ ಜೊತೆ ಸೇರಿದ್ದೇವೆ ಅಷ್ಟೇ. ಇಲ್ಲಿ ಸಿಎಂ ಸ್ಥಾನದ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ. ಬಿಜೆಪಿಯವರಿಗೆ ಬೇರೆ ಕೆಲಸವಿಲ್ಲ. ಅದಕ್ಕೇ ಸಿಎಂ ಬದಲಾವಣೆಯಾಗಲಿದೆ ಎಂದು ಮಾತನಾಡುತ್ತಿದ್ದಾರೆ ಎಂದಿದ್ದಾರೆ.