ಉಡುಗೊರೆ ಮತ್ತು ಲಾಟರಿ ಬಂದಿರುವುದಾಗಿ ಸಾರ್ವಜನಿಕರಿಗೆ ಕರೆ ಮಾಡಿ ಆನ್‌ಲೈನ್ ಮೂಲಕ ಹಣ ವರ್ಗಾವಣೆ ಮಾಡಿಕೊಂಡು ವಂಚಿಸುತ್ತಿದ್ದ ವಿದೇಶಿ ಪ್ರಜೆಯೊಬ್ಬ ಈಶಾನ್ಯ ವಿಭಾಗದ ಸೆನ್ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಬಿದರಹಳ್ಳಿ ನಿವಾಸಿ ಸ್ಯಾಮ್ಯೂಯಲ್ ಒಕೋನ್(26) ಬಂಧಿತ.
ಆರೋಪಿಯಿಂದ 5 ಸಿಮ್ ಕಾರ್ಡ್ ಹಾಗೂ ವಿವಿಧ ಬ್ಯಾಂಕ್‌ಗಳ 6 ಡೆಬಿಟ್ ಕಾರ್ಡ್ ಜಪ್ತಿ ಮಾಡಲಾಗಿದೆ. ಆಫ್ರಿಕಾ ಖಂಡದ ಘನಾ ದೇಶ ಮೂಲದ ಆರೋಪಿ ಬೆಂಗಳೂರಿಗೆ ವಿದ್ಯಾರ್ಥಿ ವೀಸಾ ಪಡೆದು ಬೆಂಗಳೂರಿಗೆ ಬಂದು, ನಕಲಿ ಸಿಮ್ ಕಾರ್ಡ್ ಮತ್ತು ಬ್ಯಾಂಕ್ ಖಾತೆಗಳ ಮೂಲಕ ಸಾರ್ವಜನಿಕರಿಂದ ಹಣ ಪಡೆದು ವಂಚಿಸುತ್ತಿದ್ದ. ಆರೋಪಿ ಮಧ್ಯವರ್ತಿಗಳ ಮೂಲಕ ತ್ರಿಪುರಾ, ಒಡಿಶಾ, ಅಸ್ಸಾಂ, ನಾಗಾಲ್ಯಾಂಡ್, ಮಿಜೋರಾಂ, ಸಿಕ್ಕಿಂ, ಅರುಣಾಚಲ ಪ್ರದೇಶ, ಮೇಘಾಲಯ ಹಾಗೂ ಮಣಿಪುರ ಸೇರಿ ಈಶಾನ್ಯಭಾರತದ ರಾಜ್ಯಗಳ ಜನರಿಗೆ ಹಣದ ಆಮಿಷವೊಡ್ಡಿ ಅವರ ಆಧಾರ್ ಕಾರ್ಡ್ ಹಾಗೂ ಇತರೆ ದಾಖಲೆಗಳನ್ನು ಸಂಗ್ರಹಿಸಿ ಬ್ಯಾಂಕ್ ಖಾತೆ ತೆರೆಸುತ್ತಿದ್ದ. ನಂತರ ಡೆಬಿಟ್, ಕ್ರೆಡಿಟ್ ಕಾರ್ಡ್ ಪಡೆದುಕೊಳ್ಳುತ್ತಿದ್ದ. ಬಳಿಕ ಅವರ ಹೆಸರಿ ನಲ್ಲಿಯೇ ಸಿಮ್ ಕಾರ್ಡ್ ಖರೀದಿಸಿ, ಕೋರಿಯರ್ ಮೂಲಕ ಬೆಂಗಳೂರಿಗೆ ತರಿಸಿಕೊಂಡು ಸಾರ್ವಜನಿಕರನ್ನು ವಂಚಿಸುತ್ತಿದ್ದ ಎಂದು ಪೊಲೀಸರು ಹೇಳಿದರು.
ನಕಲಿ ಸಿಮ್‌ಕಾರ್ಡ್ ಬಳಸಿಕೊಂಡು ಸಾರ್ವಜನಿಕರಿಗೆ ತಮಗೆ ಉಡುಗೊರೆ, ಲಾಟರಿ ಬಂದಿದೆ ಎಂದು ಕರೆ ಮಾಡುತ್ತಿದ್ದು, ಅವುಗಳನ್ನು ಪಡೆಯಲು ಕೆಲ ಶುಲ್ಕ ಪಾವತಿಸಬೇಕು ಎಂದು ನಂಬಿಸುತ್ತಿದ್ದ. ಅದನ್ನು ನಂಬಿದ ಸಾರ್ವಜನಿಕರು ಆರೋಪಿ ಸೂಚಿಸಿದ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸುತ್ತಿದ್ದರು. ಕೆಲವೇ ಹೊತ್ತಿನಲ್ಲಿ ಡೆಬಿಟ್ ಕಾರ್ಡ್ ಮೂಲಕ ಆ ಹಣ ಡ್ರಾ ಮಾಡಿಕೊಳ್ಳುತ್ತಿದ್ದ. ನಂತರ ಯಾರ ಕರೆಯನ್ನು ಆರೋಪಿ ಸ್ವೀಕರಿಸುತ್ತಿರಲಿಲ್ಲ. ಕೆಲವೊಮ್ಮೆ ತಮ್ಮ ನಂಬರ್‌ಗೆ ಸಾಲ ಕೊಡುತ್ತೇನೆ ಎಂದು ನಂಬಿಸಿ ವಂಚಿಸುತ್ತಿದ್ದ ಎಂಬುದು ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ ಎಂದು ಸೆನ್ ಠಾಣೆ ಪೊಲೀಸರು ಹೇಳಿದರು.
ಆರೋಪಿ ಸಿಕ್ಕಿ ಬಿದ್ದಿದ್ದು ಹೇಗೆ? :
ಕೆಲ ದಿನಗಳ ಹಿಂದೆ ಸೆನ್ ಠಾಣೆ ಪೊಲೀಸರು ಕೋಗಿಲು ಕ್ರಾಸ್ ಬಳಿ ಸೈಬರ್ ಆರೋಪಿಗಳಿಗಾಗಿ ಪತ್ತೆ ಕಾರ್ಯದಲ್ಲಿ ತೊಡಗಿದ್ದರು. ಅದೇ ವೇಳೆ ಆರೋಪಿ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ. ಅನುಮಾನಗೊಂಡು ತಡೆದು ವಿಚಾರಣೆ ನಡೆಸಿದ್ದಾರೆ. ಆಗ ಆರೋಪಿ ಸ್ಯಾಮ್ಯೂಯಲ್‌ನ ಪಾಸ್‌ಪೋರ್ಟ್ ಪರಿಶೀಲಿಸಿದಾಗ 2022ರ ಜ.20ರಂದೆ ಅವಧಿ ಮುಕ್ತಾಯಗೊಂಡಿತ್ತು. ಆತನ ಬಳಿ ಇರುವ ದಾಖಲೆಗಳನ್ನು ಪರಿಶೀಲಿಸಿದಾಗ ಈಶಾನ್ಯ ರಾಜ್ಯಗಳ ನಿವಾಸಿಗಳ ಹೆಸರಿನಲ್ಲಿ ವಿವಿಧ ಬ್ಯಾಂಕ್‌ಗಳ ಡೆಬಿಟ್ ಕಾರ್ಡ್ ಮತ್ತು ಸಿಮ್ ಕಾರ್ಡ್‌ಗಳು ಪತ್ತೆಯಾಗಿವೆ. ನಂತರ ವಶಕ್ಕೆ ಪಡೆದುಕೊಂಡು ತೀವ್ರವಾಗಿ ವಿಚಾರಣೆ ನಡೆಸಿದಾಗ ವಂಚನೆ ಕುರಿತು ಸತ್ಯಾಂಶ ಬೆಳಕಿಗೆ ಬಂದಿದ್ದು, ಸ್ನೇಹಿತ ಹ್ಯಾಪಿನೆಸ್ ಎಂಬಾತನ ಜತೆ ಸೇರಿ ಲಾಟರಿ, ಸಾಲ, ಗಿಫ್ಟ್, ಉದ್ಯೋಗದ ಹೆಸರಿನಲ್ಲಿ ಸಾರ್ವಜನಿಕರಿಗೆ ವಂಚಿಸುತ್ತಿರುವುದಾಗಿ ಹೇಳಿಕೆ ನೀಡಿದ್ದಾನೆ ಎಂದು ಸೆನ್ ಠಾಣೆ ಪೊಲೀಸರು ಹೇಳಿದರು.