ಫೋರ್ಟಿಸ್ ಆಸ್ಪತ್ರೆಯೂ ಇದೇ ಮೊದಲ ಬಾರಿಗೆ ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆಗೆ ಮ್ಯಾಕೋ ರೊಬೊಟಿಕ್ ತಂತ್ರಜ್ಞಾನ ವನ್ನು ಪರಿಚಯಿಸಿದ್ದು, ಈ ತಂತ್ರಜ್ಞಾನದ ಮೂಲಕ ಕೇವಲ ಒಂದು ತಿಂಗಳಲ್ಲಿ 50ಕ್ಕೂ ಹೆಚ್ಚು ರೋಗಿಗಳಿಗೆ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ.
ಈ ಕುರಿತು ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಮೂಳೆ ಮತ್ತು ಜಂಟಿ ಶಸ್ತ್ರಚಿಕಿತ್ಸಾ ವಿಭಾಗದ ನಿರ್ದೇಶಕರಾದ ಡಾ. ನಾರಾಯಣ ಹುಲ್ಸೆ, ಮ್ಯಾಕೋ ರೊಬೊಟಿಕ್ ಆರ್ಮ್ ಅಸಿಸ್ಟೆಡ್ ಟೆಕ್ನಾಲಜಿ ಬಳಸಿ ಬಹು ಅಸ್ವಸ್ಥತೆಯಿಂದ ಬಳಲುತ್ತಿದ್ದ 66 ವರ್ಷದ ಆಫ್ರಿಕನ್ ರೋಗಿಗೆ ಹೊಸ ಜೀವನ ನೀಡುವಲ್ಲಿ ಯಶಸ್ವಿಯಾಗಿದ್ದೇವೆ ಎಂದರು.
ಈ ಆಫ್ರಿಕನ್ ರೋಗಿಯು ಕಳೆದ 15 ವರ್ಷಗಳಿಂದ ಮೊಣಕಾಲು ನೋವಿನಿಂದ ಬಳಲುತ್ತಿದ್ದರು. ಕಾಲಕ್ರಮೇಣ ಅವರ ಆರೋಗ್ಯ ಸ್ಥಿತಿ ಕ್ಷೀಣಿಸ ತೊಡಗಿತು.
ಮೊಣಕಾಲು ನೋವಿನ ಜೊತೆಗೆ ಅಧಿಕ ರಕ್ತದೊತ್ತಡ, ಆಸ್ತಮಾ, ಜನ್ಮಜಾತ ಹೃದಯ ದೋಷಗಳು ಅವರ ಆರೋಗ್ಯದ ಮೇಲೆ ಇನ್ನಷ್ಟು ಪರಿಣಾಮ ಬೀರಿತು. ರೋಗಿಯು ಸಂಧಿವಾತದಿಂದಾಗಿ ಅವರ ಎರಡೂ ಮೊಣಕಾಲುಗಳು ಸಂಪೂರ್ಣವಾಗಿ ಹಾನಿಗೊಳಗಾದವು. ರೋಗಿಯು ಫೊರ್ಟಿಸ್ ಆಸ್ಪತ್ರೆಗೆ ದಾಖಲಾದ ಬಳಿಕ ಅವರ ಎರಡೂ ಮೊಣಕಾಲುಗಳಿಗೆ ಪ್ರತ್ಯೇಕವಾಗಿ 3 ದಿನಗಳ ಅಂತರದಲ್ಲಿ ಶಸ್ತ್ರಚಿಕಿತ್ಸೆ ನಡೆಸಿದೆವು. 3D ವರ್ಚುವಲ್ ಮಾದರಿ ಹಾಗೂ ಶಸ್ತ್ರಚಿಕಿತ್ಸೆ ನಡೆಸಲು ನೂತನ ತಂತ್ರಜ್ಞಾನವಾದ ಮ್ಯಾಕೋ ರೊಬೊಟಿಕ್ ತಂತ್ರಜ್ಞಾನವು ನಮಗೆ ಸಹಾಯ ಮಾಡಿತು. ಶಸ್ತ್ರಚಿಕಿತ್ಸೆಯ ಸಮಯದಲ್ಲಿ ರೊಬೊಟಿಕ್-ಆರ್ಮ್ ಮೂಳೆಯನ್ನು ಸರಿಯಾದ ಕೋನದಲ್ಲಿ ವಿಭಜಿಸಲು ನೆರವು ನೀಡಿತು. ಈ ಮೂಲಕ ಅವರಿಗೆ ಸೂಕ್ತ ರೀತಿಯಲ್ಲಿ ಶಸ್ತ್ರಚಿಕಿತ್ಸೆ ನಡೆಸಿ, ಅದರಲ್ಲಿ ಯಶಸ್ವಿ ಕಂಡೆವು ಎಂದು ವಿವರಿಸಿದರು.
ಸಾಂಪ್ರದಾಯಿಕ ಮೊಣಕಾಲು ಅಥವಾ ಸೊಂಟ ಬದಲಿ ಶಸ್ತ್ರಚಿಕಿತ್ಸೆಗಳು ಕಳೆದ ಮೂರು ದಶಕಗಳಲ್ಲಿ ರೋಗಿಗಳ ಜೀವನದ ಗುಣಮಟ್ಟವನ್ನು ಗಣನೀಯವಾಗಿ ಸುಧಾರಿಸುತ್ತಾ ಬಂದಿದೆ. ಆದರೆ, ಈ ನೂತನ ಮ್ಯಾಕೋ ರೋಬೋಟಿಕ್ ತಂತ್ರಜ್ಞಾನವೂ ಮೂಳೆಗಳ ಜೋಡಣೆಯ ನಿಖರತೆಯನ್ನು ಇನ್ನಷ್ಟು ಸ್ವಷ್ಟಗೊಳಿಸಿದೆ. ಮೂಳೆ-ಕಟ್, ಮೂಳೆ ಮತ್ತು ಮೃದು ಅಂಗಾಂಶಗಳ ಸಂರಕ್ಷಣೆ, ಶಸ್ತ್ರಚಿಕಿತ್ಸೆಯ ನಂತರದ ಅಸ್ವಸ್ಥತೆಯನ್ನು ಕಡಿಮೆ ಮಾಡಿದೆ, ವೇಗವಾಗಿ ಚೇತರಿಕೆ, ತ್ವರಿತ ವಿಸರ್ಜನೆ ಮತ್ತು ಕಡಿಮೆ ರಕ್ತದ ನಷ್ಟ ಉಂಟು ಮಾಡಲಿದ್ದು, ಇದೊಂದು ಅತ್ಯಂತ ಪ್ರಯೋಜನಕಾರಿ ತಂತ್ರಜ್ಞಾನವಾಗಿದೆ ಎಂದು ಹೇಳಿದರು.
ಈ ರೋಬೋಟಿಕ್ ಶಸ್ತ್ರಚಿಕಿತ್ಸೆಯ ನಂತರ ರೋಗಿಯು ತಕ್ಷಣವೇ ಚೇತರಿಸಿಕೊಂಡರು. ಕ್ರಮೇಣ ಅವರ ಆರೋಗ್ಯ ಸುಧಾರಿಸಿದೆ. ಪ್ರಸ್ತುತ ಅವರು ತಮ್ಮ ದೈನಂದಿನ ಚಟುವಟಿಕೆಗಳನ್ನು ಯಾರ ನೆರವೂ ಇಲ್ಲದೇ ಸ್ವಯಂ ಮಾಡಿಕೊಳ್ಳುತ್ತಿದ್ದಾರೆ. ಶಸ್ತ್ರಚಿಕಿತ್ಸೆಯಾದ ಕೇವಲ 2 ವಾರಗಳಲ್ಲಿ ರೋಗಿಯು ತಮ್ಮ ತಾಯ್ನಾಡಿಗೆ ತೆರಳಿದರು ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡಿದ ಬೆಂಗಳೂರಿನ ಫೋರ್ಟಿಸ್ ಹಾಸ್ಪಿಟಲ್‌ನ ಬಿಸಿನೆಸ್ ಹೆಡ್ ಅಕ್ಷಯ್ ಒಲೇಟಿ, "ಮ್ಯಾಕೋ ಎಂಬ ರೋಬೋಟಿಕ್ ಪ್ಲಾಟ್‌ಫಾರ್ಮ್ ಅನ್ನು ಪರಿಚಯಿಸಲಾಗಿದ್ದು, ಒಂದೇ ವೇದಿಕೆಯಲ್ಲಿ ಮೊಣಕಾಲು ಮತ್ತು ಸಂಪೂರ್ಣ ಹಿಪ್ ರಿಪ್ಲೇಸ್‌ಮೆಂಟ್ ಶಸ್ತ್ರಚಿಕಿತ್ಸೆಯನ್ನು ಅತ್ಯಂತ ಸುಲಭಗೊಳಿಸಿದೆ. ಫೋರ್ಟಿಸ್ ಆಸ್ಪತ್ರೆ ಬನ್ನೇರುಘಟ್ಟ ರಸ್ತೆಯು ದೇಶದ ಫೋರ್ಟಿಸ್ ನೆಟ್‌ವರ್ಕ್ ಆಫ್ ಹಾಸ್ಪಿಟಲ್‌ಗಳಾದ್ಯಂತ ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡ ಮೊದಲ ಆಸ್ಪತ್ರೆಯಾಗಿದೆ. ಈಗಾಗಲೇ ನಾವು ಅನೇಕ ಶಸ್ತ್ರಚಿಕಿತ್ಸೆಗಳನ್ನು ನಡೆಸಿದ್ದೇವೆ ಮತ್ತು ನಮ್ಮ ರೋಗಿಗಳ ಮುಖದಲ್ಲಿ ಸಂತೋಷ ಕಂಡಿದ್ದೇವೆ. ನಮ್ಮ ಆಸ್ಪತ್ರೆಗೆ ದಾಖಲಾಗುವ ರೋಗಿಗಳಿಗೆ ನಿಖರತೆ, ವೇಗದ ಚೇತರಿಕೆ ಮತ್ತು ಉತ್ತಮ ಅನುಭವವನ್ನು ನೀಡುವ ಅತ್ಯಾಧುನಿಕ ತಂತ್ರಜ್ಞಾನವನ್ನು ನೀಡುವುದು ನಮ್ಮ ಜವಾಬ್ದಾರಿಯಾಗಿದ್ದು, ಅದನ್ನು ಸೂಕ್ತರೀತಿಯಲ್ಲಿ ನಿಭಾಯಿಸಿಕೊಂಡು ಬಂದಿದ್ದೇವೆ. ಇದಷ್ಟೇ ಅಲ್ಲದೇ, ಆರೋಗ್ಯವನ್ನು ಪರಿವರ್ತಿಸುವ ಸಾಮರ್ಥ್ಯವನ್ನು ಹೊಂದಿರುವ ಇನ್ನೂ ಅನೇಕ ತಂತ್ರಜ್ಞಾನಗಳನ್ನು ಪರಿಚಯಿಸುವ ಕೆಲಸವನ್ನು ಮುಂದುವರೆಸಲಿದ್ದೇವೆ ಎಂದು ಹೇಳಿದರು.