ಶಿವಮೊಗ್ಗ, (ಆ.28): ಕೋವಿಡ್ ಹಿನ್ನೆಲೆಯಲ್ಲಿ ರಾಜ್ಯದ ಜನತೆ ಈ ಬಾರಿಯೂ ಗೌರಿ ಗಣೇಶ ಹಬ್ಬವನ್ನು ಸರಳವಾಗಿ ಆಚರಣೆ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಯಡಿಯೂರಪ್ಪ ಅವರು ಶಿವಮೊಗ್ಗ ಜಿಲ್ಲಾ ಪ್ರವಾಸ ಕೈಗೊಂಡಿದ್ದು, ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಕದ ರಾಜ್ಯಗಳಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾಗಿವೆ. ಈ ಹಿನ್ನೆಲೆಯಲ್ಲಿ ವೈಭವದಿಂದ ಗಣೇಶೋತ್ಸವ ಆಚರಣೆ ಸರಿಯಲ್ಲ. ಈ ಬಗ್ಗೆ ನಮ್ಮ ಸರ್ಕಾರ ಚರ್ಚೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳಲಿದೆ ಎಂದರು.
ರಾಜ್ಯ ವಿಧಾನಸಭೆ ಚುನಾವಣೆಗೆ ಒಂದೂವರೆ ವರ್ಷ ಬಾಕಿ ಇದ್ದು, ಗೌರಿ ಗಣೇಶ ಹಬ್ಬದ ನಂತರ ಪಕ್ಷ ಸಂಘಟನೆಗಾಗಿ ರಾಜ್ಯದ ಎಲ್ಲ ಜಿಲ್ಲೆಗಳ ಪ್ರವಾಸ ಮಾಡುತ್ತೇನೆ. ಜಿಲ್ಲಾ ಪ್ರವಾಸದ ನಂತರ ವಿಧಾನಸಭಾ ಕ್ಷೇತ್ರವಾರು ಪ್ರವಾಸ ನಡೆಸಿ, ಪಕ್ಷ ಅಧಿಕಾರಕ್ಕೆ ತರಲು ಪ್ರಯತ್ನ ನಡೆಸುವುದಾಗಿ ತಿಳಿಸಿದರು.
135-140 ಸ್ಥಾನ ಬಂದರೆ ನನ್ನ ಹೋರಾಟ ಸಾರ್ಥಕ ಆಗುತ್ತದೆ. ನಾನು ಮುಖ್ಯಮಂತ್ರಿ ಆಗಿದ್ದ ವೇಳೆ ಕೇವಲ ಶಿವಮೊಗ್ಗ ಜಿಲ್ಲೆಗೆ ಮಾತ್ರ ಕೆಲಸ ಮಾಡಿದ್ದೇನೆ ಎಂದು ಭಾವಿಸುವುದು ಬೇಡ. ಎಲ್ಲ ಜಿಲ್ಲೆಗಳಿಗೂ, ಸಮುದಾಯದ ಅಭಿವೃದ್ಧಿಗಾಗಿ ಹಣ ಬಿಡುಗಡೆ ಮಾಡಿದ್ದೇನೆ. ಜನರ ಕೆಲಸ ಮಾಡಲು ಅಧಿಕಾರ ಮುಖ್ಯ ಅಲ್ಲ, ಅಧಿಕಾರ ಇರದಿದ್ದರೂ ಕೆಲಸ ಮಾಡುತ್ತಿದ್ದೇನೆ. ಜನರ ಸೇವೆಗಾಗಿ ನಮ್ಮ ಮನೆಯ ಬಾಗಿಲು ಸದಾ ತೆರೆದಿರುತ್ತದೆ ಎಂದು ಹೇಳಿದರು.