Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಅರಣ್ಯ ಹಾಗೂ ವನ್ಯಜೀವಿ ಸಂಪತ್ತು ರಕ್ಷಣೆ ವಿಷಯದಲ್ಲಿ ನಮ್ಮ ಅಧಿಕಾರಿಗಳು ಮತ್ತು ಸಿಬ್ಬಂದಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಸಿಐಡಿ ಅರಣ್ಯ ಘಟಕದ ಐಜಿಪಿ ಕೆ.ವಿ.ಶರತ್‍ಚಂದ್ರ ಅವರು ತಿಳಿಸಿದ್ದಾರೆ. ಈ ಸಂಜೆಯೊಂದಿಗೆ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ಅರಣ್ಯ ಇಲಾಖೆಯೊಂದಿಗೆ ಸೇರಿ ಪೊಲೀಸ್ ಇಲಾಖೆಯ ಸಿಐಡಿ ಘಟಕ ಕೆಲಸ ಮಾಡುತ್ತಿದೆ ಎರಡೂ ಇಲಾಖೆಗಳು ಒಂದೇ ರೀತಿಯ ಜವಾಬ್ದಾರಿ ನಿರ್ವಹಿಸುತ್ತಿವೆ.
ಪ್ರಮುಖವಾಗಿ ಸಿಐಡಿ ಘಟಕ ಅರಣ್ಯದಲ್ಲಿನ ಮರಗಳನ್ನು ಕಡಿದು ದಾಸ್ತಾನು ಮಾಡಿಕೊಂಡು ಕಳ್ಳ ಸಾಗಾಣಿಕೆ ಮಾಡುವವರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದೆ.
ಪ್ರತಿದಿನ ಒಂದಲ್ಲ ಒಂದು ಪ್ರಕರಣಗಳನ್ನು ಪತ್ತೆ ಮಾಡುತ್ತಿದೆ. ಹುಲಿ, ಜಿಂಕೆ, ಚಿರತೆ ಸೇರಿದಂತೆ ವನ್ಯಜೀವಿಗಳನ್ನು ಬೇಟೆಯಾಡುವವರ ವಿರುದ್ಧವೂ ಸಹ ಕಾರ್ಯಾಚರಣೆ ನಡೆಸುತ್ತೇವೆ. ಚಿಕ್ಕಮಗಳೂರು, ಶಿವಮೊಗ್ಗ, ಚಾಮರಾಜನಗರ, ಉತ್ತರಕನ್ನಡ, ಮೈಸೂರು ಸೇರಿದಂತೆ ಅರಣ್ಯ ಭಾಗ ಹೆಚ್ಚಿರುವ ಜಿಲ್ಲೆಗಳಲ್ಲಿ ಹೆಚ್ಚಾಗಿ ನಮ್ಮ ಅಧಿಕಾರಿ, ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ.