ರಾಜ್ಯ ಸರ್ಕಾರ ರೈತರ ಬೆಳೆಸಾಲ ಮನ್ನಾ ಮಾಡಿರುವುದು ಸ್ವಾಗತಾರ್ಹ. ಆದರೇ ಅದೇ ರೀತಿ ರಾಜ್ಯದ 117 ಪಿಎಲ್‌ಡಿ ಬ್ಯಾಂಕ್‌ಗಳಲ್ಲಿ ರೈತರು ಪಡೆದಿರುವ ದೀರ್ಘಾವಧಿ ಕೃಷಿ ಸಾಲ ಮನ್ನಾ ಮಾಡುವಂತೆ ಆಗ್ರಹ ಕೇಳಿಬರುತ್ತಿದೆ.
ಕಲಬುರಗಿ ಜಿಲ್ಲೆಯ ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ಗಳು ಡಿಸಿ ಮೂಲಕ ಸಿಎಂ ಹೆಚ್. ಡಿ. ಕುಮಾರಸ್ವಾಮಿಗೆ ಮನವಿ ಮಾಡಿದ್ದಾರೆ. ಸಾಲಮನ್ನಾ ನಿರೀಕ್ಷೆಯಲ್ಲಿದ್ದ ರಾಜ್ಯದ 117 ಪಿಎಲ್‌ಡಿ ಬ್ಯಾಂಕ್‌ಗಳ ಮೂಲಕ ದೀರ್ಘಾವಧಿ ಕೃಷಿ ಸಾಲ ಪಡೆದ ರೈತರು ಸಹ ಸುಸ್ತಿದಾರರಾಗಿ ಮುಂದುವರೆದಿರುತ್ತಾರೆ. ಹೀಗಾಗಿ ಪಿಎಲ್‌ಡಿ ಬ್ಯಾಂಕ್‌ಗಳಲ್ಲಿ ಸಾಲ ಪಡೆದ ರೈತರಿಗೆ ಅನ್ಯಾಯವಾದಂತಾಗಿದೆ.
ಮತ್ತೊಂದೆಡೆ ಸಾಲ ವಸೂಲಾತಿಗಾಗಿ ಯಾವುದೇ ಕ್ರಮ ವಹಿಸಬಾರದೆಂದು ಸರ್ಕಾರ ಆದೇಶಿಸಿದೆ. ಆದರೆ ಪಿಎಲ್‌ಡಿ ಬ್ಯಾಂಕ್‌ಗಳು ಶೇಕಡ 70ರಷ್ಟು ಸಾಲ ವಸೂಲಾತಿ ಮಾಡದಿದ್ದರೆ ಹೊಸ ಸಾಲ ಹಂಚಿಕೆ ನೀಡಲು ನಬಾರ್ಡ್ ಸಂಸ್ಥೆಯವರು ನಿರಾಕರಿಸಿರುತ್ತಾರೆ. ಇದರಿಂದ ಬ್ಯಾಂಕ್ ವ್ಯವಹಾರ ನಡೆಸುವುದು ಕಷ್ಟಕರವಾಗಿದ್ದು ಬ್ಯಾಂಕ್ ಸಿಬ್ಬಂದಿಗೂ ಮಾಸಿಕ ವೇತನ ನೀಡಲು ಕಷ್ಟಸಾಧ್ಯವಾಗಿದೆ. ಹೀಗಾಗಿ ಪಿಎಲ್‌ಡಿ ಬ್ಯಾಂಕ್‌ಗಳಲ್ಲಿನ ರೈತರ ಸಂಪೂರ್ಣ ಸಾಲಮನ್ನಾ ಇಲ್ಲವೇ ಸಂಪೂರ್ಣ ಬಡ್ಡಿ ಮನ್ನಾ ಮಾಡಬೇಕು. ಇಲ್ಲವೇ ಸಾಲ ವಸೂಲಾತಿಗೆ ನೋಟಿಸ್ ನೀಡಿ ಕ್ರಮವಿಡಲು ಅನುಮತಿ ಕೊಡಬೇಕು. ಸಾಲ ವಸೂಲಾತಿ ನಿರ್ಬಂಧ ಪರಿಗಣಿಸದೇ ಹೊಸ ಸಾಲ ನೀಡುವುದಕ್ಕೆ ಅನುಮತಿ ಕೊಡಿಸಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.
ಇವುಗಳಲ್ಲಿ ಯಾವುದಾದರೂ ಒಂದು ಪ್ರಯೋಜನಕಾರಿ ಅಂಶ ಪರಿಗಣಿಸದಿದ್ದಲ್ಲಿ ರಾಜ್ಯದ 177 ಬ್ಯಾಂಕ್‌ಗಳು ತಮ್ಮ ಅಸ್ತಿತ್ವ ಉಳಿಸಿಕೊಂಡು ರೈತರಿಗೆ ಸಾಲ ನೀಡಲು ವಿಫಲವಾಗಿ ನಶಿಸಿ ಹೋಗುತ್ತವೆ. ಪಿಎಲ್‌ಡಿ ಬ್ಯಾಂಕ್ ಸಿಬ್ಬಂದಿ ಭವಿಷ್ಯ ಸರ್ಕಾರದ ಹೊಣೆಯಾಗಿದ್ದು ತಕ್ಷಣ ಕ್ರಮ ಕೈಗೊಳ್ಳುವಂತೆ ಕಲಬುರಗಿ ಡಿಸಿ ಮೂಲಕ ಸಿಎಂ ಹೆಚ್.ಡಿ.ಕುಮಾರಸ್ವಾಮಿಗೆ ಕಲಬುರಗಿ ಜಿಲ್ಲಾ ಪಿಎಲ್‌ಡಿ ಬ್ಯಾಂಕ್‌ಗಳ ಪರವಾಗಿ ಮನವಿ ಸಲ್ಲಿಸಲಾಯಿತು.