ಶ್ರೀರಾಮನ ಕುರಿತು ವಿವಾದಿತ ಹೇಳಿಕೆ ನೀಡಿರುವ ಪ್ರೊ.ಕೆ.ಎಸ್.ಭಗವಾನ್ ಅವರನ್ನು ಬಂಧಿಸಿ ಅವರ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಪ್ರತಿಭಟನೆಗಳು ಮುಂದುವರಿದಿವೆ.
ಮೈಸೂರಿನಲ್ಲಿ ನವಜೀವನ ಸಂಸ್ಥೆ ವತಿಯಿಂದ ಪ್ರತಿಭಟನೆ ನಡೆಯಿತು.
ಜಿಲ್ಲಾಧಿಕಾರಿಗಳ ಕಛೇರಿ ಮುಂಭಾಗದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ, ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ಅವರು ಇತ್ತೀಚೆಗೆ ಹಿಂದೂ ಗ್ರಂಥ ರಾಮಾಯಣದ ಶ್ರೀರಾಮನ ವಿರುದ್ಧ ನೀಡಿರುವ ಹೇಳಿಕೆ ಆಧರಿಸಿ ಭಾರತೀಯ ಹಿಂದೂ ಧರ್ಮ ಉಲ್ಲೇಖಿತ ಶ್ರೀರಾಮನ ವಿರುದ್ಧ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಭಾರತೀಯರಲ್ಲಿ ಸ್ತ್ರೀಯರಿಗೆ ಮಾತೃಸ್ಥಾನ ನೀಡಿದ್ದು, ಶ್ರೀರಾಮನ ಪತ್ನಿ ಸೀತಾಮಾತೆಯ ಬಗ್ಗೆ ಲಘುವಾದ ಹೇಳಿಕೆಗಳನ್ನು ನೀಡುತ್ತಿರುವುದು ಖಂಡನಾರ್ಹ. ಭಾರತದಲ್ಲಿರುವ ಕಾನೂನಿನಲ್ಲಿ ಎಲ್ಲಾ ಧರ್ಮಕ್ಕೂ ಅದರದ್ದೇ ಆದ ಮಹತ್ವವಿದೆ. ಭಾರತೀಯ ಪ್ರಜೆ ಬೇರೆ ಧರ್ಮದ ಬಗ್ಗೆ ಅವಹೇಳನಕಾರಿ ವಿಷಯಗಳನ್ನು ಪ್ರಚಾರ ಮಾಡುವ ಹಾಗಿಲ್ಲ ಎಂದು ಸಂವಿಧಾನದಲ್ಲಿ ನಮೂದಿಸಿದೆ.
ಈ ಕಾರಣಗಳಿಂದ ಭಾರತೀಯ ಹಿಂದೂಗಳ ಪವಿತ್ರ ಗ್ರಂಥ ರಾಮಾಯಣದ ಶ್ರೀರಾಮ ಸೀತೆ, ಲಕ್ಷ್ಮಣ, ಶೂರ್ಪನಖಿ, ರಾವಣ, ಹನುಮಂತ ವಾಯು, ಸುಗ್ರೀವ, ಮಂಡೋದರಿ ಮುಂತಾದ ವ್ಯಕ್ತಿಗಳ ವ್ಯಕ್ತಿತ್ವವನ್ನು ಕೀಳಾಗಿ ಪ್ರಶ್ನಿಸಿ ಹಿಂದೂ ಧರ್ಮದ ತೇಜೋವಧೆಗೆ ಧಕ್ಕೆಯುಂಟು ಮಾಡುತ್ತಿರುವ ಭಗವಾನ್ ಅವರನ್ನು ಬಂಧಿಸಿ ಭಾರತೀಯ ಕಾನೂನು ವ್ಯಾಪ್ತಿಯಲ್ಲಿ ಸೂಕ್ತ ಶಿಕ್ಷೆ ನೀಡಬೇಕೆಂದು ಒತ್ತಾಯಿಸಿದರು.
ಭಗವಾನ್ ವಿರುದ್ಧ ಭಾರತೀಯ ಸಂವಿಧಾನ ಅಡಿಯಲ್ಲಿ ಕಾನೂನು ಕ್ರಮ ತೆಗೆದುಕೊಳ್ಳದೇ ಇದ್ದಲ್ಲಿ ಜ.7ರಂದು ಸೋಮವಾರ ಅನಿರ್ದಿಷ್ಟಾವಧಿ ಅಮರಣಾಂತ ಉಪವಾಸ ಸತ್ಯಾಗ್ರಹವನ್ನು ಜಿಲ್ಲಾಧಿಕಾರಿ ಕಚೇರಿ ಎದುರು ನಡೆಸಲಾಗುವುದು ಎಂದು ತಿಳಿಸಿದರು.