ಕೆಆರ್‌ಎಸ್ ಸುತ್ತಮುತ್ತಲಿನ 20 ಕಿ.ಮೀ ವ್ಯಾಪ್ತಿಯಲ್ಲಿ ಐದು ದಿನ ಟ್ರಯಲ್ ಬ್ಲಾಸ್ಟ್‌ಗೆ ಷರತ್ತು ವಿಧಿಸಿ ಅನುಮತಿ ನೀಡಲಾಗಿದೆ ಎನ್ನಲಾಗಿದೆ.
ಮಂಡ್ಯ ಜಿಲ್ಲೆಯ ಕೆಆರ್‌ಎಸ್ ಸುತ್ತಮುತ್ತಲಿನ 20 ಕಿ.ಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆ ಸ್ಫೋಟದಿಂದ ಡ್ಯಾಂಗೆ ಅಪಾಯವಾಗುತ್ತೆಂಬ ವರದಿ ಬಂದಿವೆ. ಈ ಹಿನ್ನೆಲೆ ಜ.24ರಿಂದ ಐದು ದಿನ ಪುಣೆ ವಿಜ್ಞಾನಿಗಳ ತಂಡ ಸ್ಥಳ ಪರಿಶೀಲನೆ ಮಾಡಲಿದ್ದು, ಈ ಹಿನ್ನೆಲೆ ಐದು ದಿನ ಟ್ರಯಲ್ ಬ್ಲಾಸ್ಟ್‌ಗೆ ಷರತ್ತು ವಿಧಿಸಿ ಡಿಸಿ ಎನ್.ಮಂಜುಶ್ರೀ ಅನುಮತಿ ನೀಡಿದ್ದಾರೆ.
2018 ನ.13ರಂದು ಭೂ ಮಾಪನ ಕೇಂದ್ರದಲ್ಲಿ ಸ್ಫೋಟಕ ಶಬ್ದ ದಾಖಲಾಗಿತ್ತು. ಆದ್ದರಿಂದ ಮುಂದಾಗಬಹುದಾದ ಧೀರ್ಘಕಾಲಿನ ಪರಿಣಾಮ ಕುರಿತು ಅಧ್ಯಯನ ನಡೆಸಿ ತಾಂತ್ರಿಕ ವರದಿ ನೀಡುವಂತೆ ಪುಣೆ ಸಿಡಬ್ಲ್ಯೂಪಿಆರ್‌ಎಸ್ ನಿರ್ದೇಶಕರಿಗೆ ಮೈಸೂರು ಕಾವೇರಿ ನೀರಾವರಿ ನಿಗಮದ ಮುಖ್ಯ ಇಂಜಿನಿಯರ್ ಪತ್ರ ಬರೆದಿದ್ದರು. ಈ ಹಿನ್ನೆಲೆ ವಿಜ್ಞಾನಿಗಳ ತಂಡ ಆಗಮಿಸಲಿದೆ.
ಪರಿಶೀಲನೆ ನಡೆದಿತ್ತು: ಕಾವೇರಿ ನೀರಾವರಿ ನಿಗಮದ ಪತ್ರದಂತೆ ಈಗಾಗಲೇ ಅಂದರೆ 2018 ಡಿ.6 ರಿಂದ 18ರವರೆಗೆ ಪುಣೆ ಸಿಡಬ್ಲ್ಯೂಪಿಆರ್‌ಎಸ್ ತಂಡ ಕೆಆರ್‌ಎಸ್ ಸುತ್ತ ಪರಿಶೀಲನೆ ನಡೆಸಿತ್ತು. ಆದರೆ ಹೆಚ್ಚುವರಿ ಅಧ್ಯಯನದ ಅವಶ್ಯಕತೆ ಇದೆ ಎಂದು ವರದಿ ನೀಡಿದ್ದರು.
ಈ ಹಿನ್ನೆಲೆ ಜ.24ರಿಂದ ಮತ್ತೆ ಪರಿಶೀಲನೆ ನಡೆಯಲಿದ್ದು, ನಿಗಮದ ಪರವಾನಗಿ ಹೊಂದಿರುವ ಬ್ಲಾಸ್ಟಿಂಗ್ ಗುತ್ತಿಗೆದಾರರಿಂದ ಉತ್ತರ ದಂಡೆಯ ಕಡೆ ಇರುವ ಎಲ್ಲ ಕಲ್ಲು ಗಣಿಗಾರಿಕಾ ಕೇಂದ್ರದಲ್ಲಿ ಟ್ರಯಲ್ ಬ್ಲಾಸ್ಟಿಂಗ್‌ಗೆ ಅನುಮತಿ ನೀಡುವಂತೆ ನಿಗಮದ ಅಧಿಕಾರಿಗಳು ಡಿಸಿಗೆ ಪತ್ರ ಬರೆದಿದ್ದರು.