ಬೆಂಗಳೂರು: ಕಳೆದ ರಾತ್ರಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸುರಿದ ಮಹಾಮಳೆಯ ಅವಾಂತರಕ್ಕೆ ಮಹಿಳೆಯೊಬ್ಬರು ಬಲಿಯಾಗಿದ್ದಾರೆ. ಗೋಡೆ ಕುಸಿದು ಮಹಿಳಾ ಉದ್ಯೋಗಿ ಸಾವನ್ನಪ್ಪಿದ್ದಾರೆ.
ಮಹದೇವಪುರದ ಚನ್ನಸಂದ್ರದಲ್ಲಿ ಗೋಡೆ ಧರೆಗುರುಳಿ ಶಶಿಕಲಾ (35) ಎಂಬ ಮಹಿಳೆ ಮೃತಪಟ್ಟಿದ್ದಾರೆ. ಸೋಮವಾರ ಬೆಳಗ್ಗೆ ವೈಟ್ ಫೀಲ್ಡ್‌ನ ಖಾಸಗಿ ಕಂಪನಿಯಲ್ಲಿ ಹೌಸ್ ಕೀಪಿಂಗ್ ಕೆಲಸಕ್ಕೆ ಹೋದಾಗ ದುರ್ಘಟನೆ ನಡೆದಿದೆ.
ಕೆಲಸದ ಸ್ಥಳದಲ್ಲಿದ್ದ ಕಾಂಪೌಂಡ್ ಗೋಡೆ ಕುಸಿದು ಶಶಿಕಲಾ ಸಾವನ್ನಪ್ಪಿದ್ದಾರೆ. ಇಡೀ ರಾತ್ರಿ ಮಳೆಗೆ ಗೋಡೆ ನೆನೆದಿದ್ದರಿಂದ ಕುಸಿದು ಶಶಿಕಲಾ ಮೇಲೆ ಬಿದ್ದಿದೆ. ಘಟನೆಯ ಪರಿಣಾಮ ಶಶಿಕಲಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಸದ್ಯ ವೈಟ್‌ಫೀಲ್ಡ್ ಪೊಲೀಸರು ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಯಾದಗಿರಿಯ ಶಹಾಪುರ ಮೂಲದ ಶಶಿಕಲಾ ಕಳೆದ ಕೆಲವು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸಿಸುತ್ತಿದ್ದರು.
ಮೃತ ಶಶಿಕಲಾಗೆ ಇಬ್ಬರು ಸಣ್ಣ ಮಕ್ಕಳಿದ್ದು, ಗಂಡ ಕೂಡ ಕೂಲಿ ಕೆಲಸ ಮಾಡುತ್ತಿದ್ದರು. ಘಟನಾ ಸ್ಥಳಕ್ಕೆ ಮಹದೇವಪುರ ಪೊಲೀಸರು, ಡಿಸಿಪಿ ಶಶಿಕುಮಾರ್ ಗುಣಾರೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.