ಮಮತೆಯ ತೊಟ್ಟಿಲಿನಲ್ಲಿ ನವಜಾತ ಶಿಶು ಪತ್ತೆಯಾಗಿದೆ.
ಕಲಬುರಗಿ ಡಾನ್ ಬಾಸ್ಕೊ ಸಂಸ್ಥೆಯಲ್ಲಿರುವ ಮಮತೆಯ ತೊಟ್ಟಿಲಿನಲ್ಲಿ ಬೆಳಿಗ್ಗೆ ನವಜಾತ ಹೆಣ್ಣು ಮಗುವನ್ನು ಹಾಕಿದ್ದು, ಈ ಸಂಸ್ಥೆಯ ಸಿಬ್ಬಂದಿಗಳು ಈ ಹೆಣ್ಣು ಮಗುವನ್ನು ವಶಕ್ಕೆ ಪಡೆದು ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿದ್ದಾರೆ.
ಈ ಮಗುವಿನ ಮುಂದಿನ ರಕ್ಷಣೆ ಮತ್ತು ಪೋಷಣೆ ಕುರಿತು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಆದೇಶದಂತೆ ಕ್ರಮ ಜರುಗಿಸಲಾಗುತ್ತದೆ ಎಂದು ಕಲಬುರಗಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಭೀಮರಾಯ ತಿಳಿಸಿದ್ದಾರೆ.
ನವಜಾತ ಶಿಶುಗಳ ರಕ್ಷಣೆಗಾಗಿ, ಮಮತೆಯ ತೊಟ್ಟಿಲು ಕಾರ್ಯಕ್ರಮದಡಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಕಲಬುರಗಿಯ ನಗರದ ರೈಲು ನಿಲ್ದಾಣ, ರಾಜ್ಯ ಮಹಿಳಾ ನಿಲಯ, ಸರ್ಕಾರಿ ಆಸ್ಪತ್ರೆ ಹಾಗೂ ಚಿಂಚೋಳಿ ತಾಲೂಕಿನ ಚಂದಾಪುರ ತಾಲೂಕು ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಕಲಬುರಗಿಯ ಡಾನ್ ಬಾಸ್ಕೊ ಸಂಸ್ಥೆಯಲ್ಲಿ ಮಮತೆಯ ತೊಟ್ಟಿಲು ಹಾಕಲಾಗಿದೆ ಎಂದು ಅವರು ತಿಳಿಸಿದ್ದಾರೆ.