Publish Date: Wed, 03 Mar 2021 (09:46 IST)
Updated Date: Wed, 03 Mar 2021 (09:48 IST)
ಲಕ್ನೋ: ಕುಡಿದ ಮತ್ತಿನಲ್ಲಿ ಪಾಪಿ ತಂದೆಯೊಬ್ಬ ಎರಡು ವರ್ಷದ ಮಗಳನ್ನೇ ಸ್ಕಾರ್ಫ್ ಬಳಸಿ ಉಸಿರುಗಟ್ಟಿಸಿ ಹತ್ಯೆ ಮಾಡಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಅಷ್ಟೇ ಅಲ್ಲ, ತನ್ನ ಹಿರಿಯ ಪುತ್ರಿಯ ಎದುರೇ ಈ ಕೃತ್ಯ ನಡೆಸಿ ಆಕೆಯ ಕೈಗೆ ಮಗುವಿನ ಮೃತದೇಹವನ್ನು ಒಪ್ಪಿಸಿದ್ದಾನೆ. ಸೋಮವಾರ ಈ ಘಟನೆ ನಡೆದಿದೆ.
ಆಗಾಗ ಈ ಮಗು ತನ್ನದಲ್ಲ ಎಂದು ಹೇಳುತ್ತಲೇ ಇದ್ದ ಆರೋಪಿ ಮಗುವಿಗೆ ಹಿಂಸೆ ಮಾಡುತ್ತಿದ್ದಲ್ಲದೆ, ಪತ್ನಿಯ ಜೊತೆಗೂ ಜಗಳ ತೆಗೆಯುತ್ತಿದ್ದ. ಇದರಿಂದ ಬೇಸತ್ತ ಪತ್ನಿ ತನ್ನ ಮಕ್ಕಳೊಂದಿಗೆ ತವರು ಸೇರಿದ್ದಳು.
ಹಿರಿಯ ಪುತ್ರಿಗೆ ಅನಾರೋಗ್ಯವಾಗಿದೆ ಎಂದು ತಿಳಿದು ಮಾವನ ಮನೆಗೆ ಬಂದಿದ್ದ ಆರೋಪಿ ಮೂವರು ಮಕ್ಕಳನ್ನು ಬೈಕ್ ನಲ್ಲಿ ಕೂರಿಸಿಕೊಂಡು ಹೊರಗೆ ಕರೆದೊಯ್ದಿದ್ದ. ಆದರೆ ಮನೆಗೆ ಮರಳುವಾಗ ಹಿರಿಯ ಪುತ್ರಿಯ ಕೈಯಲ್ಲಿ ಮಗುವಿನ ಮೃತದೇಹವಿತ್ತು.
ಈ ಬಗ್ಗೆ ವಿಚಾರಿಸಿದಾಗ ಘಟನೆ ಬೆಳಕಿಗೆ ಬಂದಿತ್ತು. ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.