ನಾಳೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹುಬ್ಬಳ್ಳಿಗೆ ಆಗಮಿಸುತ್ತಿದ್ದಾರೆ. ಪ್ರಧಾನಿ ಮೋದಿ ಭೇಟಿ ವೇಳೆ ಕಪ್ಪು ಪಟ್ಟಿಯನ್ನು ಪ್ರದರ್ಶಿಸಲು ರೈತರು ಮುಂದಾಗಿದ್ದಾರೆ. ಕಳಸಾ ಬಂಡೂರಿ ರೈತ ಹೋರಾಟ ಸಮಿತಿ ನೇತೃತ್ವದಲ್ಲಿ ಕಪ್ಪು ಪಟ್ಟಿ ಪ್ರದರ್ಶನಕ್ಕೆ ತೀರ್ಮಾನ ಮಾಡಲಾಗಿದೆ. ಮಹದಾಯಿ ಯೋಜನೆ ಕುರಿತು ಸ್ಪಷ್ಟ ನಿಲುವು ತಿಳಿಸಲು ಆಗ್ರಹಿಸಿ ಮೋದಿಗೆ ಮನವಿ ಕೊಡಲು ರೈತರು ತೀರ್ಮಾನಿಸಿದ್ದಾರೆ. ಇದಕ್ಕೆ ಅವಕಾಶ ಕೊಡುವಂತೆ ಅವರು ಪಟ್ಟು ಹಿಡಿದಿದ್ದಾರೆ. ಪ್ರಧಾನಿಗಳು ಮೂರು ರಾಜ್ಯಗಳಾದ ಕರ್ನಾಟಕ, ಗೋವ, ಮಹಾರಾಷ್ಟ್ರದ ಸಭೆ ಕರೆದು ಸಮಸ್ಯೆ ಇತ್ಯರ್ಥಪಡಿಸಬೇಕೆಂದು ಅವರು ಆಗ್ರಹಿಸಿದ್ದಾರೆ. ಆಲಮಟ್ಟಿ ಜಲಾಶಯದ ಗೇಟ್ಗಳ ಎತ್ತರಕ್ಕೂ ಕ್ರಮ ಕೈಗೊಳ್ಳಬೇಕು. ತುಂಗಭದ್ರಾ ಡ್ಯಾಂ ಹೂಳು ತೆಗೆಸಬೇಕು. ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಂಬಲ ಬೆಲೆ ಘೋಷಿಸಬೇಕು. ಹೀಗೆ ಹತ್ತು ಹಲವು ಮನವಿಯನ್ನು ಸಲ್ಲಿಸಲು ಅವರು ತೀರ್ಮಾನಿಸಿದ್ದು, ಮೋದಿ ಭೇಟಿಗೆ ಅವಕಾಶ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ.