ಬೆಂಗಳೂರು: ಕೆಲವು ಸಮಯದ ಹಿಂದೆ ರೈತನೊಬ್ಬನನ್ನು ನಮ್ಮ ಮೆಟ್ರೊ ಸಿಬ್ಬಂದಿ ಒಳಗೆ ಬಿಡದೇ ಅವಮಾನಿಸಿದ ಘಟನೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈಗ ಬೆಂಗಳೂರಿನ ಮಾಲ್ ಒಂದರಲ್ಲಿ ಅಂತಹದ್ದೇ ಘಟನೆ ನಡೆದಿದೆ.
ನಮ್ಮ ಮೆಟ್ರೋದಲ್ಲಿ ಸಾದಾ ಡ್ರೆಸ್ ನಲ್ಲಿ ಬಂದಿದ್ದ ರೈತನನ್ನು ಒಳಗೆ ಬಿಡದೇ ಅವಮಾನಿಸಿದ ಘಟನೆ ಬಗ್ಗೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಬೆಂಗಳೂರಿನ ಪ್ರತಿಷ್ಠಿತ ಮಾಲ್ ನಲ್ಲೂ ಪಂಚೆ ಉಟ್ಟುಕೊಂಡು ಬಂದಿದ್ದಾರೆಂಬ ಕಾರಣಕ್ಕೆ ರೈತರೊಬ್ಬರನ್ನು ಒಳಗೆ ಬಿಡದೇ ಅವಮಾನಿಸಲಾಗಿದೆ.
ಬೆಂಗಳೂರಿನ ಜಿಟಿ ಮಾಲ್ ನಲ್ಲಿ ಈ ಘಟನೆ ನಡೆದಿದೆ. ಹಾವೇರಿ ಮೂಲದ ನಾಗರಾಜ್ ಎಂಬ ರೈತ ಕಚ್ಚೆ ಪಂಚೆ, ಸಾಧಾರಣ ಶರ್ಟ್ ಮತ್ತು ತಲೆ ಮೇಲೊಂದು ಪೇಟ ಸುತ್ತಿಕೊಂಡು ತಮ್ಮ ಮಗನ ಜೊತೆ ಸಿನಿಮಾ ನೋಡಲು ಮಾಲ್ ಗೆ ಬಂದಿದ್ದರು. ಆದರೆ ಅವರ ವೇಷಭೂಷಣ ನೋಡಿ ಮಾಲ್ ನ ಸಿಬ್ಬಂದಿ ಒಳಗೆ ಬಿಡಲಿಲ್ಲ. ಪಂಚೆ ಕಟ್ಟಿಕೊಂಡು ಬಂದವರಿಗೆ ಮಾಲ್ ಒಳಗೆ ಬಿಡಲ್ಲ. ನಮ್ಮ ಮಾಲ್ ನಲ್ಲಿ ಅಂತಹದ್ದೊಂದು ರೂಲ್ಸ್ ಇದೆ ಎಂದ ಸಿಬ್ಬಂದಿಗಳು ಹೊರಗೆ ಅರ್ಧಗಂಟೆ ಕೂರಿಸಿ ಅವಮಾನ ಮಾಡಿದ್ದಾರೆ ಎಂದು ಅವರ ಪುತ್ರ ಆರೋಪಿಸಿದ್ದಾನೆ.
ಈ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಘಟನೆ ಬಗ್ಗೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಅಲ್ಲಿದ್ದವರು ವಿಡಿಯೋ ಮಾಡುತ್ತಿರುವುದನ್ನು ಗಮನಿಸಿದ ಮಾಲ್ ಸಿಬ್ಬಂದಿ ಬಳಿಕ ವಿವಾದವಾಗಬಹುದೆಂದು ಆತನನ್ನು ಒಳಗೆ ಬಿಟ್ಟಿದ್ದಾರೆ.