Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕಾಂಗ್ರೆಸ್ ಗೆ ದಲಿತರ ವೋಟೂ ಬೇಕು, ನೋಟೂ ಬೇಕು

Karnataka BJP

Krishnaveni K

ಬೆಂಗಳೂರು , ಸೋಮವಾರ, 15 ಜುಲೈ 2024 (13:18 IST)
ಬೆಂಗಳೂರು: ಸಾವಿರಾರು ಕೋಟಿ ಮೊತ್ತದ ಮುಡಾ ಹಗರಣ ಮತ್ತು ದಲಿತರ ಹಣವನ್ನು ಲೂಟಿ ಮಾಡಿದ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸದನದಲ್ಲಿ ಉತ್ತರ ಕೊಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಆಗ್ರಹಿಸಿದರು.

ಬಿ.ವೈ. ವಿಜಯೇಂದ್ರ ಹಾಗೂ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರ ನೇತೃತ್ವದಲ್ಲಿ ಇಂದು ಶಾಸಕರ ಭವನದ ಮಹರ್ಷಿ ವಾಲ್ಮೀಕಿ ಪ್ರತಿಮೆ ಬಳಿ ಬಿಜೆಪಿ ವತಿಯಿಂದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಶಾಸಕರು ಮತ್ತು ವಿಧಾನಪರಿಷತ್ ಸದಸ್ಯರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಮುಡಾ ಹಗರಣದ ತನಿಖೆಯನ್ನು ನಿವೃತ್ತ ನ್ಯಾಯಾಧೀಶರಿಂದ ನಡೆಸಿದರೆ ಸಾಲದು; ಮುಖ್ಯಮಂತ್ರಿಗಳಿಗೆ ನಿಜವಾಗಿ ತಾಕತ್ತಿದ್ದರೆ ಮುಡಾ ಹಗರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು ಎಂದು ವಿಜಯೇಂದ್ರ ಅವರು ಒತ್ತಾಯಿಸಿದರು.

ಮುಖ್ಯಮಂತ್ರಿಗಳ ಕುಟುಂಬವೇ ಪಾಲುದಾರರಿದ್ದು, ಸಾವಿರಾರು ಕೋಟಿ ಬೆಲೆಬಾಳುವ ನಿವೇಶನಗಳಿಗೆ ಸಂಬಂಧಿಸಿ ಮೈಸೂರು ಮುಡಾ ಹಗರಣ ನಡೆದಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಲೇಬೇಕು ಎಂದು ಆಗ್ರಹಿಸಿದರಲ್ಲದೆ, ಮುಡಾ ಹಗರಣದ ಸಿಬಿಐ ತನಿಖೆಗೆ ಆಗ್ರಹಿಸಿ ಸದನದ ಹೊರಗೆ ಹೋರಾಟ ನಡೆಸಿದ್ದೇವೆ; ಸದನದ ಒಳಗೆ ಕೂಡ ಹೋರಾಟ ಮುಂದುವರೆಯಲಿದೆ ಎಂದು ಪ್ರಕಟಿಸಿದರು.

ಮಾನ್ಯ ಸಿದ್ದರಾಮಯ್ಯನವರು ದಲಿತರ ಹೆಸರು ಹೇಳಿಕೊಂಡು, ಪರಿಶಿಷ್ಟ ವರ್ಗ, ಪರಿಶಿಷ್ಟ ಪಂಗಡದವರಿಗೆ ನ್ಯಾಯ ಕೊಡುವುದಾಗಿ ಹೇಳಿಕೊಂಡು ಅಧಿಕಾರಕ್ಕೆ ಬಂದವರು; ಆದರೆ, ದಲಿತರ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ಲೂಟಿ ಮಾಡಿದ್ದಲ್ಲದೆ, ಅದೇ ಮೊತ್ತದಲ್ಲಿ ಲೋಕಸಭಾ ಚುನಾವಣೆ ನಡೆಸಿದ್ದಾರೆ. ಮುಖ್ಯಮಂತ್ರಿಗಳು ಮತ್ತು ಕಾಂಗ್ರೆಸ್ ಸರಕಾರದ ಬಂಡವಾಳ ಈ ಮೂಲಕ ಬಯಲಾಗಿದೆ ಎಂದು ಟೀಕಿಸಿದರು. ಈ ಹಗರಣಗಳ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು ಎಂದೂ ಒತ್ತಾಯ ಮಾಡಿದರು.
 
ಮುಖ್ಯಮಂತ್ರಿಗಳು ಆ ಸ್ಥಾನದಲ್ಲಿ ಕೂರಲು ನೈತಿಕತೆಯನ್ನು ಕಳಕೊಂಡಿದ್ದಾರೆ. ಸಮಯ ವ್ಯರ್ಥ ಮಾಡದಿರಿ; ನಿಮ್ಮ ಮಾಜಿ ಸಚಿವ ನಾಗೇಂದ್ರ ಅವರು ಇ.ಡಿ. ಕಸ್ಟಡಿಯಲ್ಲಿದ್ದಾರೆ. ನಿಗಮದ ಅಧ್ಯಕ್ಷರೂ ಆದ ಶಾಸಕ ದದ್ದಲ್ ಕಾಣೆಯಾಗಿದ್ದಾರೆ. ಹಾಗಿದ್ದರೆ ಸಿಎಂ ಉತ್ತರ ಕೊಡಬೇಕಲ್ಲವೇ ಎಂದು ವಿಜಯೇಂದ್ರ ಅವರು ಪ್ರಶ್ನೆಯನ್ನು ಮುಂದಿಟ್ಟರು. ಅಧಿಕಾರಿಗಳು ಸೇರಿಕೊಂಡು ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಹಗರಣ ಮಾಡಿದ್ದಾಗಿ ಹೇಳುವ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಅವರ ಶಾಸಕರಿಗೆ ಕ್ಲೀನ್ ಚಿಟ್ ಕೊಡುವ ದುಸ್ಸಾಹಸ ಮಾಡುತ್ತಿದ್ದಾರೆ ಎಂದು ಆಕ್ಷೇಪಿಸಿದರು.
ಕಾಂಗ್ರೆಸ್ಸಿಗರು ಭ್ರಷ್ಟಾಚಾರರಹಿತ ಆಡಳಿತ ಕೊಡುವುದಾಗಿ ಹೇಳಿ ಜನರ ಕಿವಿಗೆ ಹೂವು ಇಟ್ಟಿದ್ದರು. ಆದರೆ, ಅವರ ಬಂಡವಾಳ ಬಯಲಾಗಿದೆ ಎಂದು ಟೀಕಿಸಿದರು.
 
ಮುಖ್ಯಮಂತ್ರಿಗಳು ನಿಜವಾಗಿ ಪ್ರಾಮಾಣಿಕರೇ ಆಗಿದ್ದರೆ, ನಿಷ್ಪಕ್ಷಪಾತ ತನಿಖೆ ಆಗಬೇಕೆಂದಿದ್ದರೆ ಮುಡಾ ಹಗರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು. ಅಲ್ಲದೆ, ವಾಲ್ಮೀಕಿ ನಿಗಮದ ಹಣವನ್ನು ಲೋಕಸಭಾ ಚುನಾವಣೆಗೆ ಬಳಸಿದ ಕುರಿತು ಇ.ಡಿ. ತಿಳಿಸಿದ ಹಿನ್ನೆಲೆಯಲ್ಲಿ ಇವೆರಡೂ ಹಗರಣಗಳ ಬಗ್ಗೆ ಸದನದಲ್ಲಿ ಉತ್ತರ ಕೊಡಬೇಕು ಎಂದು ಒತ್ತಾಯಿಸಿದರು.

ವಾಲ್ಮೀಕಿ ನಿಗಮದ ಹಗರಣದ ಸಂಬಂಧ ನಾವು ನಿಲುವಳಿ ಸೂಚನೆ ಮಂಡಿಸುತ್ತಿದ್ದೇವೆ. ಇದರ ಕುರಿತು ಚರ್ಚೆ ಆಗಲೇಬೇಕು; ಮಾನ್ಯ ಮುಖ್ಯಮಂತ್ರಿಗಳು ಉತ್ತರ ಕೊಡಲೇಬೇಕು ಎಂದೂ ಅವರು ತಿಳಿಸಿದರು.
 
ಎಲ್ಲವನ್ನೂ ಸೇರಿಸಿ ಸಿಬಿಐಗೆ ಕೊಡಿ ಸ್ವಾಮಿ ಮುಖ್ಯಮಂತ್ರಿಗಳೇ; ನಮ್ಮ ಮೇಲೆ ದಬ್ಬಾಳಿಕೆ, ಹೆದರಿಸುವ ಕೆಲಸ ಮಾಡದಿರಿ ಎಂದು ವಿಜಯೇಂದ್ರ ಅವರು ಪ್ರಶ್ನೆಗೆ ಉತ್ತರ ಕೊಟ್ಟರು.

ಮುಡಾದಲ್ಲಿ ಯಾವ್ಯಾವ ಸರಕಾರದಲ್ಲಿ ಹಗರಣ ನಡೆದಿದ್ದರೂ ಎಲ್ಲ ಸೇರಿಸಿ ಸಿಬಿಐ ತನಿಖೆಗೆ ಒಪ್ಪಿಸಿ. ಸಿಎಂ ಕುಟುಂಬವೇ ಈ ಹಗರಣದಲ್ಲಿ ಭಾಗಿಯಾಗಿದೆ. ನಿಮಗೆ ಬೇಕಾದಂತೆ ನಿವೃತ್ತ ನ್ಯಾಯಾಧೀಶರಿಂದ ತನಿಖೆ ಮಾಡಿದರೆ ಸಾಕಾಗುವುದಿಲ್ಲ; ಸಿಬಿಐ ತನಿಖೆಗೆ ಕೊಡಲೇಬೇಕು ಎಂದು ಆಗ್ರಹವನ್ನು ಮುಂದಿಟ್ಟರು.
 
ಎರಡೂ ಹಗರಣಗಳನ್ನು ಒಂದು ತಾರ್ಕಿಕ ಅಂತ್ಯಕ್ಕೆ ಒಯ್ಯುವ ಬಗ್ಗೆ ನಿರ್ಧಾರ ಮಾಡಿದ್ದೇವೆ. ಅಲ್ಲಿನವರೆಗೆ ನಮ್ಮ ಹೋರಾಟ ಮುಂದುವರೆಯುತ್ತದೆ ಎಂದೂ ಅವರು ಪ್ರಶ್ನೆಗೆ ಮಾಧ್ಯಮ ಪ್ರತಿನಿಧಿಗಳ ಉತ್ತರ ಕೊಟ್ಟರು.
 
ಆರ್. ಅಶೋಕ್ ಅವರು ಮಾತನಾಡಿ, ಆತ್ಮಹತ್ಯೆ ಮಾಡಿಕೊಂಡ ವಾಲ್ಮೀಕಿ ನಿಗಮದ ಅಧಿಕಾರಿಯೂ ದಲಿತರೇ ಆಗಿದ್ದಾರೆ. ಕಾಂಗ್ರೆಸ್ಸಿಗರಿಗೆ ದಲಿತರ ವೋಟ್ ಬೇಕು; ದಲಿತರ ನೋಟು ಕೂಡ ಬೇಕು; ದಲಿತರ ಸಾವು ಬೇಕು. ಇದು ಕಾಂಗ್ರೆಸ್ ನೀತಿ ಎಂದು ಟೀಕಿಸಿದರು.

ಈ ಸರಕಾರವು ನೈತಿಕವಾಗಿ ಸತ್ತು ಹೋಗಿದೆ. ಅಧಿಕಾರದಲ್ಲಿ ಉಳಿಯುವ ಯೋಗ್ಯತೆ ಕಳಕೊಂಡಿದೆ. ಮಾನ ಮರ್ಯಾದೆ ಇದ್ದರೆ ಮುಖ್ಯಮಂತ್ರಿ ರಾಜೀನಾಮೆ ಕೊಡಬೇಕಿತ್ತು. ಇವತ್ತು ಯಾವ ಮುಖ ಇಟ್ಟುಕೊಂಡು ವಿಧಾನಸೌಧಕ್ಕೆ ಬರುತ್ತಾರೋ ಅರ್ಥ ಆಗುತ್ತಿಲ್ಲ ಎಂದು ಇದೇ ಸಂದರ್ಭದಲ್ಲಿ ಆಕ್ಷೇಪಿಸಿದರು.
 
 

Share this Story:

Follow Webdunia kannada

ಮುಂದಿನ ಸುದ್ದಿ

ಮುಂಗಾರು ಅಧಿವೇಶನಕ್ಕೆ ಮುನ್ನವೇ ಸದನದ ಹೊರಗೆ ಬಿಜೆಪಿ ಪ್ರತಿಭಟನೆ