ಬೆಂಗಳೂರು: ದಿವಂಗತ ನಟ, ಪುನೀತ್ ರಾಜ್ ಕುಮಾರ್ ಸಮಾಧಿ ದರ್ಶನಕ್ಕೆ ನೂರಾರು ಅಭಿಮಾನಿಗಳ ದಂಡು ರಾಜಧಾನಿಯ ಲಗ್ಗೆರೆ ರಿಂಗ್ ರಸ್ತೆಯ ಕಂಠೀರವ ಸ್ಟುಡಿಯೋ ಕಡೆ ಹರಿದು ಬರುತ್ತಿದೆ. ಸಮಾಧಿಗೆ ಭೇಟಿ ಕೊಟ್ಟ ಅಭಿಮಾನಿಗಳು ಅಪ್ಪುಗೆ ಜೈಕಾರ ಹಾಕುತ್ತಿದ್ದಾರೆ. ಪುನೀತ್ ಸಮಾಧಿ ಬಳಿ ದೀಪ ಬೆಳಗಿಸಿ ನಮನ ಸಲ್ಲಿಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಕಂಠೀರವ ಸ್ಟುಡಿಯೋ ಸುತ್ತಾ ಸ್ಥಳೀಯ ಪೊಲೀಸ್, ಆರ್.ಪಿ.ಎಫ್ ಬಿಗಿ ಭದ್ರತೆ ನೀಡಿದೆ.
ನಿನ್ನೆ ಸಂಜೆಯಿಂದ ಅವಕಾಶ:
ಅಪ್ಪು ಸಮಾಧಿ ದರ್ಶನಕ್ಕಾಗಿ ಕಾಯುತ್ತಿದ್ದ ಅಭಿಮಾನಿ ದೇವರುಗಳಿಗೆ ಕೊನೆಗೂ ದರ್ಶನದ ಭಾಗ್ಯ ಸಿಕ್ಕಿದೆ. ನಿನ್ನೆ ( ಮಂಗಳವಾರ) ಕುಟುಂಬಸ್ಥರಿಂದ ಹಾಲು-ತುಪ್ಪ ಕಾರ್ಯದ ಬಳಿಕ ಸಂಜೆ ಆರು ಗಂಟೆಯ ಬಳಿಕ ಅಭಿಮಾನಿಗಳು ಪುನೀತ್ ರಾಜ್ಕುಮಾರ್ ಸಮಾಧಿಗೆ ನಮನ ಸಲ್ಲಿಸಿದರು.
ದೂರದೂರಿನಿಂದ ಅಭಿಮಾನಿಗಳು:
ದೂರದೂರಿನಿಂದ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ಬಂದಿದ್ದರಿಂದ ನಿನ್ನೆಯೇ ಅಪ್ಪು ಸಮಾಧಿಯ ದರ್ಶನಕ್ಕೆ ಅನುವು ಮಾಡಿ ಕೊಡಲಾಗಿತ್ತು. ಸ್ಥಳೀಯ ಪೊಲೀಸ್ ಹಾಗೂ ರ್ಯಾಪಿಡ್ ಆ್ಯಕ್ಷನ್ ಫೋರ್ಸ್ ಬಿಗಿ ಭದ್ರತೆಯಲ್ಲಿ ಅಭಿಮಾನಿಗಳಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಅಪ್ಪು ಸಮಾಧಿಗೆ ಭೇಟಿ ಕೊಟ್ಟ ಫ್ಯಾನ್ಸ್ ಜೈಕಾರ ಹಾಕಿದ್ದರು.
ಬೆಳಗ್ಗೆ 8 ರಿಂದ ಸಂಜೆ 8 ರವರೆಗೆ ಅವಕಾಶ:
ಇಂದು ( ಬುಧವಾರ) ಕೂಡ ಬೆಳಗ್ಗೆ 8 ರಿಂದ ರಾತ್ರಿ 8 ರವರೆಗೆ ಅಭಿಮಾನಿಗಳಿಗೆ ಪುನೀತ್ ಸಮಾಧಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ದೀಪಾವಳಿ ಹಬ್ಬ ಪ್ರಾರಂಭವಾಗಿದ್ದರಿಂದ ದರ್ಶನ ಮಾಡುವ ಸಾರ್ವಜನಿಕರ ಸಂಖ್ಯೆಯಲ್ಲಿ ಕೊಂಚ ಇಳಿಕೆಯಾಗಿದ್ದು ಕಂಡು ಬರುತ್ತಿದ್ದೆ.