ಕಚೇರಿಯಲ್ಲಿ ಪರಿಶೀಲಿಸಲು ಹಲವು ದಾಖಲೆಗಳನ್ನು ಕೇಳಿ, ತಹಸೀಲ್ದಾರ್ ಸೇರಿದಂತೆ ಸಿಬ್ಬಂದಿಯನ್ನು ಯಾಮಾರಿಸಿದ್ದ ನಕಲಿ ಲೋಕಾಯುಕ್ತ ಅಧಿಕಾರಿಯನ್ನು ಪೊಲೀಸರು ಬಂಧಿಸಿದ್ದಾರೆ.
ಹಾಸನದ ಸಿವಿಲ್ ಗುತ್ತಿಗೆ ಎಚ್.ಟಿ.ಜ್ಞಾನೇಶ್ (52 ವರ್ಷ) ಬಂಧಿತ.
ಸೊಪ್ಪಹಳ್ಳಿಯ ಸರ್ವೆ ನಂಬರ್ 113 ರಲ್ಲಿನ 12.31 ಎಕರೆ ಪಿತ್ರಾರ್ಜಿತ ಜಮೀನಿನ ದಾಖಲೆಗಳನ್ನು ಸಂಗ್ರಹಿಸುವ ಉದ್ದೇಶದಿಂದ ತಾಲೂಕು ಕಚೇರಿಗೆ ಲೋಕಾಯುಕ್ತ ಅಧಿಕಾರಿಯಾಗಿ ಹೋಗಿರುವುದು ವಿಚಾರಣೆಯಿಂದ ತಿಳಿದು ಬಂದಿದೆ. ಈತನ ಜತೆಗೆ ಸಹಾಯಕರಾಗಿ ನಾಟಕವಾಡಿದ್ದ ರಾಜೇಶ್ ಮತ್ತು ದೃಶ್ಯಂತ್ ಬಂಧನಕ್ಕೆ ಬಲೆ ಬೀಸಲಾಗಿದೆ.
ಡಿವೈಎಸ್ಪಿ ವಿ.ಕೆ.ವಾಸುದೇವ್ ನೇತೃತ್ವದಲ್ಲಿ ವೃತ್ತ ನಿರೀಕ್ಷಕ ರಾಜು, ಪಿಎಸ್‌ಐಗಳಾದ ಶಿವಣ್ಣ, ಸಂಗಮೇಶ್, ಸಿಬ್ಬಂದಿ ಪೆಂಚಲಪ್ಪ ತಂಡವು ನಕಲಿ ಅಧಿಕಾರಿಯನ್ನು ಬಂಧಿಸಿದೆ. ತಾಲೂಕು ಕಚೇರಿಯಲ್ಲಿನ ಸಿಸಿ ಕ್ಯಾಮೆರಾ ಪರಿಶೀಲಿಸಿ, ತನಿಖೆ ಕೈಗೊಂಡಾಗ ಆರೋಪಿ ಸಿಕ್ಕಿ ಬಿದ್ದಿದ್ದಾನೆ.
ಕಳೆದ ಸೆ.22 ರಂದು ಹಿರಿಯ ಅಧಿಕಾರಿಯಾಗಿ ಕಾಣುವಂತೆ ಇನ್ ಶರ್ಟ್ ಮಾಡಿಕೊಂಡು ಮತ್ತು ಕೈಯಲ್ಲಿ ಫೈಲ್ ಹಿಡಿದುಕೊಂಡು ಸಹಚರನೊಂದಿಗೆ ಬಂದ ಜ್ಞಾನೇಶ್, ಮೊದಲು ಚಿಕ್ಕಬಳ್ಳಾಪುರ ನೋಂದಣಿ ಕಚೇರಿಯಲ್ಲಿ ತನ್ನ ಹೆಸರು ಪ್ರಣವ್, ಬೆಂಗಳೂರು ಕೇಂದ್ರ ಲೋಕಾಯುಕ್ತ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದ. ಕೆಲ ಪ್ರಶ್ನೆಗಳನ್ನು ಕೇಳಿ ಮಾಹಿತಿ ಪಡೆದುಕೊಂಡ ಬಳಿಕ ತಾಲೂಕು ಕಚೇರಿಯಲ್ಲಿ ಸುತ್ತಾಡಿದ್ದು ಶಿರಸ್ತೆದಾರ್‌ರಿಂದ ತಾಲೂಕಿನ ಸೊಪ್ಪಹಳ್ಳಿ ಗ್ರಾಮದ ಸರ್ವೆ ನಂಬರ್ 103ಕ್ಕೆ ಸಂಬಂಧಿಸಿದ ದಾಖಲೆಗಳನ್ನು ತೆಗೆದುಕೊಂಡಿದ್ದಾನೆ. ಕೊನೆಗೆ ತಹಸೀಲ್ದಾರ್ ಗಣಪತಿ ಶಾಸ್ತ್ರಿ ಚಲನವಲನಗಳ ಬಗ್ಗೆ ಅನುಮಾನಗೊಂಡು ಗುರುತಿನ ಚೀಟಿ ಕೇಳಿದಾಗ ಕೊಟ್ಟಿಲ್ಲ. ಬೆಂಗಳೂರು ಕೇಂದ್ರ ಕಚೇರಿಯ ಹಿರಿಯ ಅಧಿಕಾರಿಗಳಿಗೆ ಮೊಬೈಲ್ನಲ್ಲಿ ಕರೆ ಮಾಡಿ, ಮಾತನಾಡುವುದಾಗಿ ತಿಳಿಸಿದಾಗ ಹಿಂಜರಿದಿದ್ದಾನೆ. ನೀವು ಯಾರು?, ಎಲ್ಲಿ ಕೆಲಸ ಮಾಡುವುದು? ನಿಮ್ಮ ಬಳಿಕ ಐಡಿ ಕಾರ್ಡು ಏಕೆ ಇಲ್ಲ ಎಂಬುದಾಗಿ ಹೇಳುತ್ತಿದ್ದಂತೆ ಪರಾರಿಯಾಗಿದ್ದ.