ಬೆಂಗಳೂರು: ವಾಲ್ಮೀಕಿ ಹಗರಣದ ಆರೋಪಿಯಾಗಿರುವ ಮಾಜಿ ಸಚಿವ ನಾಗೇಂದ್ರ ಇಂದು ಜೈಲಿನಿಂದ ಜಾಮೀನಿನ ಮೇಲೆ ಹೊರಬಂದಿದ್ದರೆ ಇತ್ತ ಅವರ ವಿರುದ್ಧ ವಿಪಕ್ಷ ನಾಯಕ ಆರ್ ಅಶೋಕ್ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಪ್ರಕರಣದಲ್ಲಿ ನಾಗೇಂದ್ರ ಅವರೇ ಪ್ರಮುಖ ಆರೋಪಿ ಎಂದು ಬಿಜೆಪಿ ಪ್ರತಿಪಾದಿಸುತ್ತಲೇ ಇದೆ. ಇದರ ಅವರ ವಿರುದ್ಧ ದಾಖಲಾಗಿದ್ದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಜಾಮೀನು ಪಡೆದು ಹೊರಬಂದರು. ಇದರ ಬೆನ್ನಲ್ಲೇ ನನ್ನ ವಿರುದ್ಧ ಬಿಜೆಪಿ ಷಡ್ಯಂತ್ರ ಮಾಡಿ ಇಲ್ಲದ ಆರೋಪ ಹೊರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆದರೆ ಈ ನಡುವೆ ನಾಗೇಂದ್ರ ತಮ್ಮ ಮನೆ ಖರ್ಚಿಗೂ ವಾಲ್ಮೀಕಿ ನಿಗಮದ ದುಡ್ಡು ಬಳಸುತ್ತಿದ್ದರು ಎಂಬುದಕ್ಕೆ ನಮ್ಮ ಬಳಿ ಸಾಕ್ಷಿಗಳೇ ಇವೆ ಎಂದು ಆರ್ ಅಶೋಕ್ ಆರೋಪಿಸಿದ್ದಾರೆ. ನಿಗಮದ ಹಣವನ್ನು ನಾಗೇಂದ್ರ ತಮ್ಮ ಮನೆಯ ಕರೆಂಟ್ ಬಿಲ್ ಕಟ್ಟಲು, ಮನೆಯ ಕೆಲಸದವರಿಗೆ ಸಂಬಳ ಕೊಡಲು, ಕುಟುಂಬ ಸದಸ್ಯರಿಗೆ ವಿಮಾನ ಟಿಕೆಟ್ ಖರೀದಿಸಲು, ವಾಹನಗಳಿಗೆ ಡೀಸೆಲ್ ತುಂಬಿಸಲು ಬಳಸುತ್ತಿದ್ದರು ಎಂಬುದಕ್ಕೆ ನಮ್ಮ ಬಳಿ ಸಾಕ್ಷ್ಯಗಳೇ ಇವೆ ಎಂದಿದ್ದಾರೆ.
ಪರಿಶಿಷ್ಟ ಜಾತಿ, ಪಂಗಡದವರಿಗೆ ಮಿಸಲಾಗಿದ್ದ ಹಣದಲ್ಲಿ ಇಷ್ಟು ದೊಡ್ಡ ಭ್ರಷ್ಟಾಚಾರ ನಡೆದಿರುವಾಗಲೂ ಆತ್ಮಸಾಕ್ಷಿ ಇರುವ ಸಿಎಂ ತಮ್ಮ ಸ್ಥಾನದಲ್ಲಿ ಮುಂದುವರಿಯಲ್ಲ. ಪ್ರಾಮಾಣಿಕತೆಗಿಂತ ಪ್ರತಿಷ್ಠೆಯೇ ದೊಡ್ಡದು ಎಂಬವರು ಈಗ ಕರ್ನಾಟಕದಲ್ಲಿ ಅಧಿಕಾರದಲ್ಲಿದ್ದಾರೆ ಎನ್ನವುದು ಕನ್ನಡಿಗರ ದುಸ್ಥಿತಿ ಎಂದು ಅಶೋಕ್ ವಾಗ್ದಾಳಿ ನಡೆಸಿದ್ದಾರೆ.