ಬೆಂಗಳೂರು: ಹಿಜಾಬ್ ನಿಷೇಧ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದ ಬೆನ್ನಲ್ಲೇ ಈಗ ರಾಜ್ಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಮತ್ತೆ ಜಟಾಪಟಿ ಶುರುವಾಗಿದೆ.
ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಹೋಗುವುದಕ್ಕೆ ಯಾವುದೇ ತಕರಾರು ಇಲ್ಲ. ಇದಕ್ಕೆ ಅಡ್ಡಿಪಡಿಸುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದರು. ಇದು ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ.
ನಾವು ಕೂಡಾ ಇನ್ನು ಕೇಸರಿಮಯವಾಗಿ ಶಾಲಾ, ಕಾಲೇಜಿಗೆ ಹೋಗಬೇಕಾಗುತ್ತದೆ ಎಂದು ಹಿಂದೂ ಸಂಘಟನೆಗಳು ಎಚ್ಚರಿಕೆ ನೀಡಿವೆ. ಈ ಹಿಂದೆ ಬಿಜೆಪಿ ಸರ್ಕಾರವಿದ್ದಾಗ ಹಿಜಾಬ್ ನಿಷೇಧ ಭಾರೀ ಸದ್ದು ಮಾಡಿತ್ತು. ಇದೀಗ ಮತ್ತೆ ಹಿಜಾಬ್ ಗಲಾಟೆ ಜೋರಾಗುತ್ತಿದೆ.
ಈ ನಡುವೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ರಾಜ್ಯದಲ್ಲಿ ಹಿಂದೆಯೂ ಹಿಜಾಬ್ ಗೆ ನಿಷೇಧವಿರಲಿಲ್ಲ ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ. ವಸ್ತ್ರಸಂಹಿತೆ ಜಾರಿಯಿದ್ದ ಶಿಕ್ಷಣ ಸಂಸ್ಥೆಯಲ್ಲಿ ಮಾತ್ರ ಹಿಜಾಬ್ ಧರಿಸುವಂತಿಲ್ಲ ಎಂದು ನಿಯಮವಿತ್ತು. ಆದರೆ ಹಿಜಾಬ್ ಗೆ ನಿಷೇಧ ಎಂದು ಎಲ್ಲೂ ಹೇಳಿರಲಿಲ್ಲ. ಇದೀಗ ರಾಜಕೀಯ ಕಾರಣಕ್ಕೆ ಹಿಜಾಬ್ ಪ್ರಸ್ತಾಪ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.