50 ಕೋಟಿ ರೂ.ಗಿಂತ ಹೆಚ್ಚಿನ ಮೊತ್ತದ ಟೆಂಡರ್‌ಗಳ ಪರಿಶೀಲನೆಗೆ ನಿವೃತ್ತ ಉನ್ನತಾಧಿಕಾರಿಗಳು, ಆರ್ಥಿಕ ತಜ್ಞರು ಮತ್ತು ಸಂಬಂಧಪಟ್ಟ ತಾಂತ್ರಿಕ ಅಧ್ಯಯನ ಸಂಸ್ಥೆಗಳನ್ನು ಒಳಗೊಂಡಿರುವ ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಕಟಿಸಿದ್ದಾರೆ.
ಶಿವಮೊಗ್ಗದ ಬಿಜೆಪಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉನ್ನತ ಮಟ್ಟದ ಸಮಿತಿಯನ್ನು ಕೆಟಿಪಿ ಕಾಯ್ದೆಯನ್ವಯ ರಚಿಸಲಾಗಿದೆ. ಸಮಿತಿಯು ಕಾಮಗಾರಿಯ ಅಂದಾಜು ಮೊತ್ತ, ಕೆಟಿಟಿಪಿಯನ್ವಯ ಟೆಂಡರ್ ನಿಯಮಗಳು ಇವುಗಳನ್ನು ಪರಿಶೀಲಿಸಿದ ನಂತರವೇ ಟೆಂಡರ್ ಪ್ರಕ್ರಿಯೆ ಪ್ರಾರಂಭವಾಗಬೇಕು. ಈ ಸಮಿತಿಯು ಕೆಲವೇ ದಿನಗಳಲ್ಲಿ ಕಾರ್ಯಾರಂಭ ಮಾಡಲಿದೆ ಎಂದು ಹೇಳಿದರು.
ಸರ್ಕಾರದ ಎಲ್ಲ ಇಲಾಖೆಗಳ 50 ಕೋಟಿ ರೂ. ಮೀರಿದ ಟೆಂಡರ್ಗಳಿಗಾಗಿ ಈ ನಿಯಮ ಜಾರಿಯಲ್ಲಿದೆ. ಟೆಂಡರ್‌ಗಳು ಹೆಚ್ಚಾದ ಸಂದರ್ಭದಲ್ಲಿ ಟೆಂಡರ್ ಪರಿಶೀಲನೆಗೆ ಅನುಕೂಲವಾಗುವಂತೆ ಪರ್ಯಾಯ ಸಮಿತಿಯನ್ನು ಶೀಘ್ರವಾಗಿ ರಚಿಸಲಾಗಿದೆ ಎಂದು ಅವರು ಹೇಳಿದರು.