ಮುಂಬರುವ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಮತದಾರರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ 5 ಪ್ರಮುಖ ವ್ಯಕ್ತಿಗಳನ್ನು ನಮ್ಮ ಬೆಂಗಳೂರು ಐಕಾನ್ಸ್” ಗಳಾಗಿ ನೇಮಕ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಮತ್ತು ಬಿಬಿಎಂಪಿ ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ರವರು ತಿಳಿಸಿದರು.
ನಮ್ಮ ಬೆಂಗಳೂರು ಐಕಾನ್ಸ್ ಕಾರ್ಯಕ್ರಮಕ್ಕೆ ಇಂದು ಪುಟ್ಟಣ್ಣ ಚೆಟ್ಟಿ ಪುರಭವನ(ಟೌನ್ ಹಾಲ್)ನಲ್ಲಿ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ಮತದಾನ ಮಾಡುವ ಸಲುವಾಗಿ ನಗರದ ಜನತೆಗೆ ಉಮ್ಮಸ್ಸು ತುಂಬಿಸುವ ಸಲುವಾಗಿ ಹಾಗೂ ಚುನಾವಣಾ ಹಬ್ಬಕ್ಕಾಗಿ ಈ 5 ಪ್ರಮುಖ ವ್ಯಕ್ತಿಗಳು ನಮ್ಮ ಜೊತೆ ಕೈಜೋಡಿಸಿ ನಾಗರಿಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಿದ್ದಾರೆ ಎಂದು ಹೇಳಿದರು.
ವ್ಯವಸ್ಥಿತವಾಗಿ ಮತದಾನ ಮಾಡುವ ಸಲುವಾಗಿ 10 ದಿನಗಳ ಮುಮಚಿತವಾಗಿಯೇ ಮತದಾನದ ಚೀಟಿ ಹಾಗೂ ಮತಗಟ್ಟೆಯ ಮಾಹಿತಿ ನೀಡಲಾಗುವುದು. ಇಲ್ಲವೇ ವಿ.ಹೆಚ್.ಎ ತಂತ್ರಾಂಶದಲ್ಲಿ ಮತದಾರರ ಗುರುತಿನ ಚೀಟಿ ಸಂಖ್ಯೆ ನಮೂದಿಸಿದರೆ ಸಾಕು ಎಲ್ಲಾ ಮಾಹಿತಿ ಲಭ್ಯವಾಗಲಿದೆ ಎಂದು ತಿಳಿಸಿದರು.
ಮತ ಚಲಾಯಿಸುವುದು ಎಲ್ಲರ ಆದ್ಯ ಕರ್ತವ್ಯ ಹಾಗೂ ಜವಾಬ್ದಾರಿಯಾಗಿದೆ. ಹಿಂದಿನ ದಿನಗಳಲ್ಲಿ ಮತದಾನ ಮಾಡುವ ದಿನ ಮತಗಟ್ಟೆಗಳ ಬಳಿ ಯಾವುದೇ ರೀತಿಯ ಸೌಲಭ್ಯಗಳು ಇರುತ್ತಿರಲಿಲ್ಲ. ಆದರೀಗ ಎಲ್ಲಾ ರೀತಿಯ ಸೌಲಭ್ಯಗಳನ್ನು ಕಲ್ಪಿಸಿದ್ದರೂ ಕೂಡಾ ಮತ ಚಲಾಯಿಸುವ ಸಂಖ್ಯೆ ಬಹಳಷ್ಟು ಕಡಿಮೆಯಿದೆ. ನಿಮಗೆ ಮತ ಚಲಾಯಿಸಲು ಇಷ್ಟವಿಲ್ಲದಿದ್ದರೆ ನೋಟ ಮಾಡಲು ಕೂಡಾ ಅವಕಾಶವಿರುತ್ತದೆ. ಆದ್ದರಿಂದ ಎಲ್ಲರೂ ಮತ ಚಲಾಯಿಸಲು ಮನವಿ ಮಾಡಿದರು.
ಬೆಂಗಳೂರು ನಗರದ ಪೊಲೀಸ್ ಆಯುಕ್ತರಾದ ಪ್ರತಾಪ್ ರೆಡ್ಡಿ ರವರು ಮಾತನಾಡಿ, ಮುಂಬರುವ ಚುನಾಣೆಯಲ್ಲಿ ಮತದಾರರು ಉತ್ತಮ ರೀತಿಯಲ್ಲಿ ಭಾಗವಹಿಸಿ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಬೇಕು. ಬೆಂಗಳೂರು ನಗರ ವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ. ಆದರೇ ಮತ ಚಲಾವಣೆಯಲ್ಲಿ ಮಾತ್ರ ಶೇಕಡಾಚಾರು ಸಾಕಷ್ಟು ಹಿಂದಿದ್ದಾರೆ. ಈ ಬಗ್ಗೆ ನಾಗರಿಕರಲ್ಲಿ ಹೆಚ್ಚು ಜಾಗೃತಿ ಮೂಡಿಸಿ ಎಲ್ಲರೂ ಮತದಾನ ಮಾಡುವಂತೆ ಮಾಡಬೇಕು ಎಂದು ತಿಳಿಸಿದರು.
ಬೆಂಗಳೂರು ನಗರದಲ್ಲಿ ಜಾಗೃತಿ ಮೂಡಿಸುವ ಸಲುವಾಗಿ “ನಮ್ಮ ಬೆಂಗಳೂರು ಐಕಾನ್ಸ್”ಗಳ ವಿವರಗಳು ಈ ಕೆಳಕಂಡಂತಿದೆ:
1. ಅನುಪ್ ಶ್ರೀಧರ್, ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್(ಅರ್ಜುನ ಪ್ರಶಸ್ತಿ ವಿಜೇತರು)
2. ಶರತ್ ಎಂ. ಗಾಯಕ್ವಾಡ್, ಅಂತಾರಾಷ್ಟ್ರೀಯ ಪ್ಯಾರಾ ಈಜುಗಾರರು.
3. ಮೋಹನ್ ಕುಮಾರ್.ಎನ್, ಬುಡಕಟ್ಟು ಜನಾಂಗದ ಗಾಯಕರು.
4. ಆನಂದ್.ಹೆಚ್(ಮಾಸ್ಟರ್ ಆನಂದ್), ಕನ್ನಡ ಚಿತ್ರ ಮತ್ತು ಕಿರುತೆರೆ ಕಲಾವಿದ ಮತ್ತು ನಿರೂಪಕರು.
5. ತೇಜಸ್ವಿನಿ ಬಾಯ್ .ವಿ, ಅಂತಾರಾಷ್ಟ್ರೀಯ ಕಬ್ಬಡಿ ಆಟಗಾರ್ತಿ(ಅರ್ಜುನ ಪ್ರಶಸ್ತಿ ವಿಜೇತರು)
ಈ ವೇಳೆ ಚುನಾವಣಾ ವಿಭಾಗದ ವಿಶೇಷ ಆಯುಕ್ತರಾದ ಉಜ್ವಲ್ ಕುಮಾರ್ ಘೋಷ್, ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷಾದ ಸಂಗಪ್ಪ, ಅಪರ ಜಿಲ್ಲಾ ಚುನಾವಣಾ ಅಧಿಕಾರಿಗಳಾದ ಡಾ. ಹರೀಶ್ ಕುಮಾರ್, ಡಾ. ಜಗದೀಶ್ ನಾಯ್ಕ್, ಸ್ವೀಪ್ ನೋಡಲ್ ಅಧಿಕಾರಿ ಸಿದ್ದೇಶ್ವರ್ ಚುನಾವಣಾ ವಿಭಾಗದ ಉಪ ಆಯುಕ್ತರಾದ ಉಮೇಶ್ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.