Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಆತುರವಾಗಿ ಶಿಕ್ಷಣ ನೀತಿ ಜಾರಿ ಮಾಡಿಲ್ಲ: ಡಾ.ಸಿ.ಎನ್.ಅಶ್ವತ್ಥನಾರಾಯಣ

ಆತುರವಾಗಿ ಶಿಕ್ಷಣ ನೀತಿ ಜಾರಿ ಮಾಡಿಲ್ಲ: ಡಾ.ಸಿ.ಎನ್.ಅಶ್ವತ್ಥನಾರಾಯಣ
bangalore , ಭಾನುವಾರ, 5 ಸೆಪ್ಟಂಬರ್ 2021 (20:33 IST)
ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿಯನ್ನು ತರಾತುರಿಯಲ್ಲಿ ಜಾರಿಗೆ ತರಲಾಗುತ್ತಿದೆ ಎಂದು ಪ್ರತಿಪಕ್ಷಗಳು ಮಾಡುತ್ತಿರುವ ಆರೋಪವನ್ನು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಸಾರಾಸಗಟಾಗಿ ತಳ್ಳಿಹಾಕಿದಲ್ಲದೆ, ಇದು ಅರ್ಥರಹಿತ ಹಾಗೂ ರಾಜಕೀಯ ದುರುದ್ದೇಶದಿಂದ ಕೂಡಿದ ಟೀಕೆ ಎಂದು ಹೇಳಿದರು.
 
ಬೆಂಗಳೂರಿನಲ್ಲಿ ಭಾನುವಾರ ಕಾಲೇಜು ಶಿಕ್ಷಣ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. 
 
ಹೊಸ ಶಿಕ್ಷಣ ನೀತಿಯನ್ನು ಕೆಲವರು ಆತುರಾತುರವಾಗಿ ಜಾರಿ ಮಾಡಲಾಗಿದೆ ಎಂದು ಹೇಳುತ್ತಿರುವ ಮಾತಿನಲ್ಲಿ ಲವಲೇಶವೂ ಸತ್ಯಾಂಶವಿಲ್ಲ. ದೇಶದ ಶ್ರೇಷ್ಟ ತಜ್ಞರು, ವಿದ್ವಾಂಸರು, ವಿವಿಧ ಕ್ಷೇತ್ರಗಳ ಸಾಧಕರು ಅವಿರತವಾಗಿ ಐದೂವರೆ ವರ್ಷ ಕಾಲ ಸಮಗ್ರ ಅಧ್ಯಯನ, ಮಾಹಿತಿ ಸಂಗ್ರಹ, ಚರ್ಚೆ, ಸಂವಾದ, ಟೀಕೆ-ಟಿಪ್ಪಣಿಗಳೆಲ್ಲವನ್ನೂ ಮಾಡಿಕೊಂಡು, ಐದೂವರೆ ಲಕ್ಷಕ್ಕೂ ಹೆಚ್ಚು ಸಲಹೆಗಳನ್ನು ಪಡೆದು ರೂಪಿಸಿದ ನೀತಿ ಇದು ಎಂದರು. 
 
ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ವಿಧ್ಯುಕ್ತ ಜಾರಿಯು ಅಗಸ್ಟ್‌ 23ರಂದು ಆಗಿದೆ ನಿಜ. ಆದರೆ, ಒಂದೇ ವರ್ಷದಲ್ಲಿ ಇಡೀ ನೀತಿಯನ್ನು ಜಾರಿ ಮಾಡಲು ಸಾಧ್ಯವಿಲ್ಲ. ಈ ನೀತಿಯನ್ನು ಹಂತ ಹಂತವಾಗಿ ಜಾರಿ ಮಾಡಲಾಗುತ್ತಿದ್ದು, ಒಟ್ಟಾರೆ ಜಾರಿಗೆ 15 ವರ್ಷಗಳ ಕಾಲಾವಕಾಶ ಇದೆ. ಆದರೆ, ರಾಜ್ಯ ಸರಕಾರ 10 ವರ್ಷಗಳಲ್ಲಿಯೇ ಪೂರ್ಣವಾಗಿ ಅನುಷ್ಠಾನಕ್ಕೆ ತರಲು ನಿರ್ಧರಿಸಿದೆ. 2030ರ ಹೊತ್ತಿಗೆ ಶಿಕ್ಷಣ ನೀತಿಯನ್ನು ರಾಜ್ಯದಲ್ಲಿ ಆಮೂಲಾಗ್ರವಾಗಿ ಜಾರಿಗೆ ತರಲಾಗುವುದು ಎಂದು ಸಚಿವರು ಹೇಳಿದರು. 
 
ಶಿಕ್ಷಣ ನೀತಿ ಜಾರಿಯಲ್ಲಿ ದೇಶದಲ್ಲೇ ಮೊದಲಿಗರಾಗಬೇಕು ಎಂಬ ಹಠವೇನೂ ಸರಕಾರಕ್ಕಿಲ್ಲ. ಎಲ್ಲರಿಗಿಂತ ಮೊದಲು ಜಾರಿ ಮಾಡುತ್ತಿರುವುದು ನಮ್ಮ ರಾಜ್ಯವೇ ಎನ್ನುವುದು ಕಾಕತಾಳೀಯ ಅಷ್ಟೇ. ಶಿಕ್ಷಣ ನೀತಿ ಕರಡು ಸಮಿತಿಯಲ್ಲಿ ಅಧ್ಯಕ್ಷರಾಗಿ ಡಾ.ಕೆ.ಕಸ್ತೂರಿರಂಗನ್, ಸದಸ್ಯರಾಗಿ ಪ್ರೊ.ಎಂ.ಕೆ.ಶ್ರೀಧರ್‌, ಪ್ರೊ.ಟಿ.ವಿ.ಕಟ್ಟೀಮನಿ, ಡಾ.ಅನುರಾಗ್‌ ಬೇಹರ್‌ ಅವರು ಇದ್ದರು. ಇವರೆಲ್ಲರೂ ಕನ್ನಡಿಗರು. ಈ ಕಾರಣಕ್ಕಾಗಿ ನಮಗೆ ಪ್ರೋತ್ಸಾಹ, ಉತ್ಸಾಹ ಇದ್ದದ್ದು ನಿಜ. ಹಾಗೆಂದು ಶಿಕ್ಷಣ ನೀತಿಯನ್ನು ಒಂದೇ ವರ್ಷವೇ ಆತುರಕ್ಕೆ ಬಿದ್ದು ಜಾರಿ ಮಾಡುತ್ತಿದ್ದೇವೆ ಎಂದರ್ಥವಲ್ಲ ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು. 
 
ನೀತಿಯಲ್ಲಿ ವಿದ್ಯಾರ್ಥಿಯೇ ಕೇಂದ್ರಬಿಂದು 
 
ರಾಷ್ಟ್ರೀಯ ಶಿಕ್ಷಣ ನೀತಿ ಸಂಪೂರ್ಣ ವಿದ್ಯಾರ್ಥಿ ಕೇಂದ್ರಿತ. ಇಡೀ ನೀತಿಯಲ್ಲಿಯೇ ಎಲ್ಲಿಯೇ ಆದರೂ ವಿದ್ಯಾರ್ಥಿಯ ವಿರುದ್ಧ ಒಂದಂಶವೂ ಇಲ್ಲ. ಇಡೀ ನೀತಿಗೆ ವಿದ್ಯಾರ್ಥಿಯೇ ಹಕ್ಕುದಾರ, ವಿದ್ಯಾರ್ಥಿಯೇ ಮಾಲೀಕ ಎಂದ ಸಚಿವರು; ಕಲಿಕೆ  ಮತ್ತು ಆಯ್ಕೆಯಲ್ಲಿ ವಿದ್ಯಾರ್ಥಿಗೆ ಮುಕ್ತ ಸ್ವಾತಂತ್ರ್ಯವಿದೆ ಎನ್ನುವ ಅಂಶವಿದೆ ಬಿಟ್ಟರೆ ಒಟ್ಟಾರೆ ಶಿಕ್ಷಣ ನೀತಿಯಲ್ಲಿ ಯಾರ ವಿರುದ್ಧವೂ ಏನೂ ಇಲ್ಲವೇ ಇಲ್ಲ ಎಂದರು. 
 
ಶಿಕ್ಷಣ ನೀತಿಯಿಂದ 100% ಅನುಕೂಲ ಆಗುವುದು ವಿದ್ಯಾರ್ಥಿಗೆ ಮಾತ್ರ. ಆದರೆ, ಶ್ರಮ ಹಾಕಬೇಕಾಗಿರುವುದು ಅಧ್ಯಾಪಕರು, ವಿಶ್ವವಿದ್ಯಾಲಯಗಳು. ಈ ಸವಾಲನ್ನು ನಾವೆಲ್ಲರೂ ಸ್ವೀಕಾರ ಮಾಡಿದ್ದೇವೆ. ಈ ಬಗ್ಗೆ ಸರಕಾರ ಅತ್ಯಂತ ಮುಕ್ತ ಮನಸ್ಸು ಹೊಂದಿದೆ ಎಂದು ಸ್ಪಷ್ಟಪಡಿಸಿದರು ಸಚಿವರು. 
 
ಸ್ವಾತಂತ್ರ್ಯ ಇರಲಿಲ್ಲ 
 
ಈವರೆಗಿನ ಶಿಕ್ಷಣದಲ್ಲಿ ವಿದ್ಯಾರ್ಥಿ ಅಥವಾ ಶೈಕ್ಷಣಿಕ ಸಂಸ್ಥೆಗಳಿಗೆ ಸ್ವಾತಂತ್ರ್ಯ ಎಂಬುದು ಇರಲಿಲ್ಲ. ಮುಕ್ತ ಅವಕಾಶಗಳಿಗಂತೂ ಅವಕಾಶವೇ ಇರಲಿಲ್ಲ. ಅಸಹಾಯಕತೆಯಿಂದ ಸಧೃಢತೆಯತ್ತ ಸಾಗುವುದೇ ದೊಡ್ಡ ಪ್ರಶ್ನೆಯಾಗಿತ್ತು. ಈ ವ್ಯವಸ್ಥೆ ಬದಲಾಗಲಿದೆ. ವಿದ್ಯಾರ್ಥಿಗೆ ಕಲಿಯಲು ಅದೆಷ್ಟು ಸ್ವಾತಂತ್ರ್ಯ ಸಿಗುತ್ತದೆಯೋ ಅದೇ ರೀತಿ ಶಿಕ್ಷಣ ಸಂಸ್ಥೆಗೂ ಸ್ವಾಯತ್ತತೆ ನೀಡಲಾಗುವುದು. ಆರ್ಥಿಕ, ಆಡಳಿತ ಹಾಗೂ ಶೈಕ್ಷಣಿಕ ವಿಚಾರಗಳಲ್ಲಿ ಶಿಕ್ಷಣ ಸಂಸ್ಥೆಗಳಿಗೆ ಅಧಿಕಾರ ಕೊಡಲಾಗುವುದು ಎಂದು ಸಚಿವರು ಪ್ರಕಟಿಸಿದರು. 
 
ಯಾರೋ ಎಲ್ಲೋ ಕೂತು ನಿಯಂತ್ರಣ ಮಾಡುವ ವ್ಯವಸ್ಥೆ ತೊಲಗಿ ಹೋಗಲಿದೆ. ಅಧಿಕಾರ ದುರ್ಬಳಕೆ, ಸ್ವಜನ ಪಕ್ಷಪಾತ, ಅನಗತ್ಯ ಹಸ್ತಕ್ಷೇಪ ಇತ್ಯಾದಿಗಳಿಗೆ ಕಡಿವಾಣ ಬೀಳಲಿದೆ ಎಂದು ಸಚಿವರು ಒತ್ತಿ ಹೇಳಿದರು. 
 
ಪಾರದರ್ಶಕತೆ ನಮ್ಮ ನೀತಿ 
 
ಸಮಾಜದ ಪ್ರತಿ ಸಮಸ್ಯೆಗೂ ಶಿಕ್ಷಣವೇ ಏಕೈಕ ಪರಿಹಾರ ಎಂದು ನಂಬಿದೆ ಸರಕಾರ. ಇದೇ ದಿಕ್ಕಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡುತ್ತಲೇ ಶಿಕ್ಷಕರ ಗೌರವ-ಘನತೆ ಹೆಚ್ಚಿಸುವ ಎಲ್ಲ ಕ್ರಮಗಳನ್ನೂ ವಹಿಸಲಾಗುತ್ತಿದೆ. ಬೋಧಕರ ವರ್ಗಾವಣೆ, ನೇಮಕಾತಿ, ಆಡಳಿತ ಯಾವುದರಲ್ಲೂ ಪಾರದರ್ಶಕತೆಯನ್ನು ಬಿಟ್ಟಿಲ್ಲ. ಪಾರದರ್ಶಕತೆಯೇ ನಮ್ಮ ನೀತಿ ಎಂದು ಸಚಿವರು ಹೇಳಿದರು. 
 
ಬೋಧಕರು, ಪ್ರಾಂಶುಪಾಲರ ನೇಮಕಾತಿ ಪಾರದರ್ಶಕವಾಗಿದೆ. ಅರ್ಹತೆ ಮಾತ್ರ ಆಯ್ಕೆಗಿರುವ ಏಕೈಕ ಮಾನದಂಡ. ರಾಜಕೀಯ, ಸ್ವಜನ ಪಕ್ಷಪಾತ, ಹಸ್ತಕ್ಷೇಪ ಯಾವುದಕ್ಕೂ ಅವಕಾಶವೇ ಇಲ್ಲ. ಇಂಥ ಎಲ್ಲ ಅಂಶಗಳನ್ನು ಶೂನ್ಯಕ್ಕೆ ತರಲಾಗಿದೆ ಎಂದು ಸಚಿವರು ನುಡಿದರು.
 
 
ರಾಷ್ಟ್ರೀಯ ಶಿಕ್ಷಣ ನೀತಿಯಿಂದ ರಾಷ್ಟ್ರಕ್ಕೆ ಒಳ್ಳೆಯದು: ಶ್ರೀಗಳು 
 
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶಯ ನುಡಿಗಳನ್ನಾಡಿದ ತುಮಕೂರಿನ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಶ್ರೀ ಸ್ವಾಮಿ ವೀರೇಶಾನಂದ ಸರಸ್ವತಿ ಅವರು, “ರಾಷ್ಟ್ರೀಯ ಶಿಕ್ಷಣ ನೀತಿ-2020 ದೇಶಕ್ಕೆ ಅಗತ್ಯವಾಗಿದೆ. ರಾಷ್ಟ್ರದ ಮರು ನಿರ್ಮಾಣಕ್ಕೆ ಈ ನೀತಿಯನ್ನು ಯಾವ ಭಿನ್ನಮತಕ್ಕೂ ಅವಕಾಶ ಇಲ್ಲದೆ ಜಾರಿ ಮಾಡಬೇಕು” ಎಂದು ಪ್ರತಿಪಾದಿಸಿದರು. 
 
ಬಲಿಷ್ಠ ಭಾರತ ನಿರ್ಮಾಣಕ್ಕೆ ಸ್ವಾಮಿ ವಿವೇಕಾನಂದರು ಪ್ರತಿಪಾದಿಸಿದ ಎಲ್ಲ ಅಂಶಗಳೂ ಈ ನೀತಿಯಲ್ಲಿವೆ. ಎನ್‌ಇಪಿ ಎಂದರೆ ಭಾರತವನ್ನು ಭಾರತದ ಮೂಲಕವೇ ನೋಡಿಕೊಳ್ಳುವುದು ಹಾಗೂ ಭಾರತದ ಮೂಲಕವೇ ಭಾರತವನ್ನು ಮರು ರೂಪಿಸುವುದು ಎಂದು ಸ್ವಾಮೀಜಿ ಅವರು ಹೇಳಿದರು. 
 
ಅಷ್ಟೇ ಅಲ್ಲದೆ, ಭಾರತವನ್ನು ಭಾರತೀಯ ಮೌಲ್ಯಗಳು, ಚಿಂತನೆಗಳಿಂದಲೇ ಉಳಿಸಿಕೊಳ್ಳಬೇಕು ಹಾಗೂ ಭಾರತೀಯ ಮೌಲ್ಯಗಳ ಮೂಲಕವೇ ಭಾರತವನ್ನು ಪುನಾ ನಿರ್ಮಾಣ ಮಾಡಬೇಕು ಎಂದು ಪೂಜ್ಯರು ನುಡಿದರು. 
 
ಅಧ್ಯಕ್ಷತೆ ವಹಿಸಿದ್ದ ಶಿವಾಜಿನಗರ ಶಾಸಕ ರಿಜ್ವಾನ್‌ ಅರ್ಷದ್‌ ಮಾತನಾಡಿ, ಹೊಸ ಶಿಕ್ಷಣ ನೀತಿಗೆ‌ ವಿರೋಧ ಏನೂ ಇಲ್ಲ. ಸಚಿವರ ಬಗ್ಹೆಯೂ‌ ನಮಗೆ ವಿಶ್ವಾಸ ಇದೆ. ಆದರೆ ಒಮ್ಮೆ ಶಾಸನ ಸಭೆಯಲ್ಲಿ ಚರ್ಚೆಯಾಗಬೇಕಿತ್ತು ಎನ್ನುವುದು‌ ಪಕ್ಷದ ನಿಲುವು ಎಂದು‌ ಅಭಿಪ್ರಾಯ ವ್ಯಕ್ತಪಡಿಸಿದರು. 
 
ಇದೇ ವೇಳೆ ರಾಜ್ಯ ಉನ್ನತ ಶಿಕ್ಷಣ ಪರಿಷತ್‌ ಉಪಾಧ್ಯಕ್ಷ ಪ್ರೊ.ತಿಮ್ಮೇಗೌಡ ಹಾಗೂ ವಿಜ್ಞಾನಿ, ರಾಜ್ಯ ಉನ್ನತ ಶಿಕ್ಷಣ ಅಕಾಡೆಮಿ ನಿರ್ದೇಶಕ ಪ್ರೊ.ಎಸ್.‌ಎಂ.ಶಿವಪ್ರಸಾದ್‌ ಅವರನ್ನು ಗೌರವಿಸಿ ಸತ್ಕರಿಸಲಾಯಿತು. 
 
ಅಲ್ಲದೆ, ಸಮಗ್ರ ಕಲಿಕಾ ವ್ಯವಸ್ಥೆ (LMS) ಯಲ್ಲಿ ಅತ್ಯುತ್ತಮ ಕಂಟೆಂಟ್‌ ರೂಪಿಸಲು ಕಾರಣಕರ್ತರಾದ ರಾಜ್ಯದ ವಿವಿಧ ಕಾಲೇಜುಗಳ ಅಧ್ಯಾಪಕರು, ಸಹಾಯಕ ಪ್ರಾಧ್ಯಾಪಕರನ್ನು ಕೂಡ ಇದೇ ವೇಳೆ ಸತ್ಕರಿಸಿದರು. ಶಿಕ್ಷಕ ದಿನಾಚರಣೆ ನಿಮಿತ್ತ ಕೆಲ ಬೋಧಕರು, ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. 
 
ವೇದಿಕೆಯ ಮೇಲೆ ಶಾಸಕ ಅ.ದೇವೇಗೌಡ, ಕಾಲೇಜು ಶಿಕ್ಷಣ ಆಯುಕ್ತ ಪಿ.ಪ್ರದೀಪ, ಬೆಂಗಳೂರು ನಗರ ವಿವಿ ಕುಲಪತಿ ಪ್ರೊ.ಲಿಂಗರಾಜು ಗಾಂಧಿ ಉಪಸ್ಥಿತದಿದ್ದರು.
education

Share this Story:

Follow Webdunia kannada

ಮುಂದಿನ ಸುದ್ದಿ

ಭಾರಿ ಶಬ್ದದ ಅಧ್ಯಯನ ವರದಿ ನೀಡಲು ತಜ್ಞರಿಗೆ ಸೂಚಿಸಲಾಗಿದೆ: ಸಚಿವೆ ಶಶಿಕಲಾ ಜೊಲ್ಲೆ