ರಾಮನಗರ: ಜಿಲ್ಲೆಯ ಮಾಗಡಿ ತಾಲೂಕಿನ ಕುದೂರು ಪ್ರೌಢಶಾಲೆಗೆ ಈಸ್ಟರ್ನ್ ಕ್ಯಾಂಡಿಮೆಂಟ್ ಸಂಸ್ಥೆ ತನ್ನ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ಯೋಜನೆ ಅಡಿಯಲ್ಲಿ ೧೦ ಕಂಪ್ಯೂಟರ್ ಗಳನ್ನು ಉಚಿತವಾಗಿ ದೇಣಿಗೆ ನೀಡಿದೆ.
ಶಾಲೆಯಲ್ಲಿ ಅಳವಡಿಸಿರುವ ನೂತನ ಕಂಪ್ಯೂಟರ್ ಪ್ರಯೋಗಾಲಯವನ್ನು ಈಸ್ಟರ್ನ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಫೀರೋಜ್ ಮೀರನ್ ಬುಧವಾರ ಉದ್ಘಾಟನೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಈಸ್ಟರ್ನ್ ಭೂಮಿಕಾ ಮೂಲಕ ಸಂಸ್ಥೆ ಸಾಮಾಜಿಕ ಜವಾಬ್ದಾರಿ ನಿರ್ವಹಿಸುವ ಕಾರ್ಯ ಮಾಡುತ್ತಿದ್ದೇವೆ. ಸಂಸ್ಥೆಯ ಮೂಲಕ ಹಲವಾರು ವರ್ಷಗಳಿಂದ ಶಾಲೆ ಕಾಲೇಜುಗಳಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸುತ್ತದೆ ಬಂದಿದೆ. ಪ್ರಮುಖವಾಗಿ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದೇವೆ.
ಈ ವರ್ಷ ಕುದೂರು ಶಾಲೆಗೆ ಕಂಪ್ಯೂಟರ್ ಗಳನ್ನು ನೀಡಲು ತೀರ್ಮಾನಿಸಿ, ೧೦ ಕಂಪ್ಯೂಟರ್ ಒದಗಿಸಿದ್ದೇವೆ. ಈ ಕಂಪ್ಯೂಟರ್ ಗಳ ಮೂಲಕ ಮಕ್ಕಳು ಹೆಚ್ಚಿ ಜ್ಞಾನ ಪಡೆಯುವಂತಾಗಲು ಎಂದರು.
ಈಗ ಅಳವಡಿಸಿರುವ ಕಂಪ್ಯೂಟರ್ ಗಳಲ್ಲಿ ಮುಂದಿನ ದಿನಗಳಲ್ಲಿ ತಾಂತ್ರಿಕ ತೊಂದರೆಯಾದರೂ ಈಸ್ಟರ್ನ್ ಸಂಸ್ಥೆಯೇ ಸರಿಪಡಿಸುವ ಜವಾಬ್ದಾರಿ ನಿರ್ವಹಿಸಲಿದೆ ಎಂದು ಭರವಸೆ ನೀಡಿದರು.
ಕುದೂರು ಶಾಲಾ ಆಡಳಿತ ಮಂಡಳಿ ಹಾಗೂ ಗ್ರಾಮಸ್ಥರ ಸಹಕಾರ ನಮಗೆ ಹೆಚ್ಚಿನ ಸಾಮಾಜಿಕ ಸೇವೆ ಮಾಡಲು ಪ್ರೋತ್ಸಾಹ ನೀಡಿದೆ ಎಂದು ಹೇಳಿದರು.
ಮಾಗಡಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದೇಶ್ವರ್ ಮಾತನಾಡಿ, ದೇಶದಲ್ಲಿ ಉನ್ನತ ಹುದ್ದೆಗಳನ್ನು ಪಡೆದವರು ಸರ್ಕಾರಿ ಶಾಲೆಯಲ್ಲಿಯೇ ಓದಿದ್ದಾರೆ. ಸರ್ಕಾರಿ ಶಾಲೆಯಲ್ಲಿ ಓದುವ ಮಕ್ಕಳಿಗೆ ಭವಿಷ್ಯದಲ್ಲಿ ಸಾಕಷ್ಟು ಅವಕಾಶಗಳಿವೆ. ಮಕ್ಕಳು ಕಂಪ್ಯೂಟರ್ ಕಲಿಕೆ ಮೂಲಕ ಹೆಚ್ಷಿನ ಜ್ಞಾನ ಪಡೆದುಕೊಂಡು ಉನ್ನತ ಮಟ್ಟಕ್ಕೇರಬೇಕು ಎಂದು ಹೇಳಿದರು.
ಈಸ್ಟರ್ನ್ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕಿ ಕೃತಿಕಾ ಮಾತನಾಡಿ, ವೇಗವಾಗಿ ಬೆಳೆಯುತ್ತಿರುವ ಜಗತ್ತಿನಲ್ಲಿ ಕಂಪ್ಯೂಟರ್ ಅತ್ಯಂತ ಅಗತ್ಯವಿದೆ. ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣ ಮುಖ್ಯವಾಗಿರುವುದರಿಂದ ನಮ್ಮ ಸಂಸ್ಥೆಯ ಮೂಲಕ ಕುದೂರು ಶಾಲೆಗೆ ಕಂಪ್ಯೂಟರ್ ಒದಗಿಸುವ ಕಾರ್ಯ ಮಾಡಿದ್ದೇವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಈಸ್ಟರ್ನ್ ಸಂಸ್ಥೆ ನಿರ್ದೇಶಕ ಮೋಹನ್ಬಲಾಲ್ ಮೇನನ್, ಕುದೂರು ಶಾಲೆಯ ಹಳೆಯ ವಿದ್ಯಾರ್ಥಿ ಡಾ.ಕೆ. ಮಂಜುನಾಥ ದಂಪತಿ, ತಾಲೂಕು ಪಂಚಾಯತಿ ಸದಸ್ಯೆ ದಿವ್ಯಾನುಭವದ ಚಂದ್ರಶೇಖರ, ಕುದೂರು ಜೂನಿಯರ್ ಕಾಲೇಜ್ ಪ್ರಾಂಶುಪಾಲ ಕಾಂತರಾಜ್ , ಎಸ್ ಡಿ ಎಂ ಸಿ ಅಧ್ಯಕ್ಷ. ಅಶೋಕ್, ಪ್ರೌಢಶಾಲೆ ಮುಖ್ಯೋಧ್ಯಾಪಕ ಎಂ.ಎಸ್. ನಾಗರಾಜ್ ಉಪಸ್ಥಿತರಿದ್ದರು.