ಬೆಂಗಳೂರು: ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಸಿಐಡಿಯ ಡಿವೈಎಸ್ ಪಿ ಲಕ್ಷ್ಮೀ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಮ್ಮ ಗೆಳೆಯನ ಮನೆಯಲ್ಲಿ ರಾತ್ರಿ ಪಾರ್ಟಿ ಮಾಡಿದ್ದ ಲಕ್ಷ್ಮೀ ಬಳಿಕ ಅಲ್ಲಿಯೇ ಕೊಠಡಿಯೊಂದರಲ್ಲಿ ನೇಣು ಹಾಕಿ ಜೀವಕೊನೆಗಾಣಿಸಿದ್ದಾರೆ.
ಇವರ ಆತ್ಮಹತ್ಯೆಯ ಹಿಂದಿನ ಕಾರಣಗಳ ಬಗ್ಗೆ ಈಗ ಭಾರೀ ಚರ್ಚೆಯಾಗುತ್ತಿದೆ. 2012 ರಲ್ಲಿ ನವೀನ್ ಎಂಬಾತನನ್ನು ಮದುವೆಯಾಗಿದ್ದ ಲಕ್ಷ್ಮೀ ಕೆಲವು ಸಮಯದಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು. ಮದುವೆಯಾಗಿ 8 ವರ್ಷಗಳಾದರೂ ಮಕ್ಕಳಾಗಿರಲಿಲ್ಲ. ಇದರಿಂದ ದಂಪತಿ ನಡುವೆ ವೈಮನಸ್ಯವೂ ಇತ್ತು. ಈ ಹಿನ್ನಲೆಯಲ್ಲಿ ಲಕ್ಷ್ಮೀ ಮದ್ಯದ ದಾಸಿಯಾಗಿದ್ದರು. ಇದಕ್ಕೂ ಮೊದಲು ಮದ್ಯ ಸೇವನೆಯಿಂದ ಆರೋಗ್ಯಕ್ಕೆ ತೀವ್ರ ಹಾನಿಯಾಗಿದ್ದರಿಂದ ವೈದ್ಯರು ಎಚ್ಚರಿಕೆಯನ್ನೂ ನೀಡಿದ್ದರು ಎನ್ನಲಾಗಿದೆ.
ಆದರೆ ನಿನ್ನೆ ಅವರು ಗೆಳೆಯರ ಬಳಗದೊಂದಿಗೆ ಮನೋಹರ್ ಎಂಬವರ ಮನೆಯಲ್ಲಿ ಪಾರ್ಟಿ ಮಾಡಿದ್ದು, ಈ ವೇಳೆ ಕಂಠಪೂರ್ತಿ ಮದ್ಯಸೇವಿಸಿದ್ದರು ಎನ್ನಲಾಗಿದೆ. ಬಳಿಕ ವಾಶ್ ರೂಂಗೆ ಹೋಗಿ ಬರುತ್ತೇನೆಂದು ಹೋಗಿದ್ದ ಲಕ್ಷ್ಮೀ ಗೆಳೆಯನ ಮನೆಯ ಕೊಠಡಿಯೊಂದರಲ್ಲಿ ಬಾಗಿಲು ಹಾಕಿಕೊಂಡು ನೇಣಿಗೆ ಶರಣಾಗಿದ್ದಾರೆ. ಅವರು ಎಷ್ಟು ಹೊತ್ತಾದರೂ ಹೊರಗೆ ಬಾರದೇ ಇದ್ದಾಗ ಅನುಮಾನಗೊಂಡ ಗೆಳೆಯರು ಬಾಗಿಲು ತೆರೆದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಇದೀಗ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೊಳಪಡಿಸಿದ್ದು, ಇದಾದ ಬಳಿಕ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರಿಸಲಿದ್ದಾರೆ.