ಸರ್ಕಾರಿ ಮತ್ತು ಅನುದಾನಿತ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ಈ ವರ್ಷವೂ ಸಹ ಸೈಕಲ್ ಭಾಗ್ಯವಿಲ್ಲ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಸರ್ಕಾರಕ್ಕೆ ಸಲ್ಲಿಕೆ ಮಾಡಿರುವ ಪ್ರಸ್ತಾವನೆಗೆ ಇನ್ನು ಒಪ್ಪಿಗೆ ಸಿಕ್ಕಿಲ್ಲ ಎನ್ನಲಾಗಿದೆ 2022-23ನೇ ಸಾಲಿನ ಶೈಕ್ಷಣಿಕ ವರ್ಷ ಮೇ 16ರಿಂದ ಆರಂಭವಾಗಲಿದೆ.
ಆದರೆ ಸರ್ಕಾರದ ಒಪ್ಪಿಗೆ ಸಿಗದ ಕಾರಣ ಈ ಬಾರಿಯೂ ವಿದ್ಯಾರ್ಥಿಗಳಿಗೆ ಸೈಕಲ್ ತುಳಿಯುವ ಭಾಗ್ಯವಿಲ್ಲ. ಕರ್ನಾಟಕ ಸರ್ಕಾರ 2006-07ನೇ ಸಾಲಿನಲ್ಲಿ ಸೈಕಲ್ ನೀಡುವ ಯೋಜನೆ ಆರಂಭಿಸಿತ್ತು. ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸೈಕಲ್ ನೀಡುವ ಯೋಜನೆಗೆ 792 ಕೋಟಿ ರೂ. ಬೇಕು ಎಂದು ಅಂದಾಜಿಸಲಾಗಿದೆ. ಅಂದಾಜು ವೆಚ್ಚ ಸೇರಿದಂತೆ ಯೋಜನೆ ವಿವರಗಳನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಹಣಕಾಸು ಇಲಾಖೆಗೆ ಕಳುಹಿಸಿದೆ. ಆದರೆ ಪ್ರತಿಕ್ರಿಯೆ ಬಂದಿಲ್ಲ ಎಂದು ಹೇಳಲಾಗಿದೆ.