Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕಲಿಕಾ ಚೇತರಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮೊದಲ ರಾಜ್ಯ ಕರ್ನಾಟಕ

ಕಲಿಕಾ ಚೇತರಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮೊದಲ ರಾಜ್ಯ ಕರ್ನಾಟಕ
bangalore , ಶುಕ್ರವಾರ, 18 ಮಾರ್ಚ್ 2022 (20:11 IST)
ಕಲಿಕಾ ಹಿನ್ನಡೆ ಸರಿದೂಗಿಸಲು ‘ಕಲಿಕಾ ಚೇತರಿಕೆ’ ಎಂಬ ವಿಶೇಷ  ಕಾರ್ಯಕ್ರಮವನ್ನು ಜಾರಿಗೊಳಿಸುತ್ತಿರುವ ದೇಶದ ಮೊದಲ ರಾಜ್ಯ ಕರ್ನಾಟಕವಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವರು ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಸಿ. ನಾಗೇಶ್ ತಿಳಿಸಿದರು.
 
ಜಯನಗರದಲ್ಲಿರುವ ಆರ್.ವಿ. ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶುಕ್ರವಾರ(ಮಾ.18) ಕಲಿಕಾ ಚೇತರಿಕೆ ಕಾರ್ಯಕ್ರಮ ಉದ್ಘಾಟಿಸಿ ಸಚಿವರು ಮಾತನಾಡಿದರು.
 
‘ಕೋವಿಡ್-19 ಸೋಂಕಿನ ಋಣಾತ್ಮಕ ಪರಿಣಾಮ ಶಿಕ್ಷಣ ಕ್ಷೇತ್ರದ ಮೇಲೆ ಅತಿ ಹೆಚ್ಚಿನ ಪ್ರಮಾಣದಲ್ಲಿ ಬೀರಿದೆ. ತರಗತಿಗಳಿಲ್ಲದೆ ಧೀರ್ಘಾವಧಿಯಲ್ಲಿ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಸಮಸ್ಯೆಯಾಗಿದೆ. ಅದರ ಜೊತೆಗೆ ಶಿಕ್ಷಣ ಇಲಾಖೆಯಲ್ಲೂ ಸವಾಲುಗಳು ಇವೆ. ಸವಾಲುಗಳನ್ನು ಮೆಟ್ಟಿ ನಿಂತು ಕಲಿಕಾ ಚೇತರಿಕೆ ಕಾರ್ಯಕ್ರಮದ ಮೂಲಕ ಶಿಕ್ಷಣ ಮುಂದುವರೆಸಿ, ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಶಿಕ್ಷಕರು ಕಾರ್ಯ ನಿರ್ವಹಿಸಬೇಕಿದೆ’ ಎಂದು ಸಚಿವರು ನುಡಿದರು.
 
‘ತರಗತಿಗಳು ಇಲ್ಲದ ಕಾರಣ ಮಕ್ಕಳಿಗೆ ಬರವಣಿಗೆಯಲ್ಲೂ ಸಾಕಷ್ಟು ಸಮಸ್ಯೆಯಾಗಿದೆ. ಕೇವಲ ಮಕ್ಕಳು ಮಾತ್ರವಲ್ಲ ಶಿಕ್ಷಿತರು ಕೂಡ ಬರವಣಿಗೆ ಮೇಲಿನ ಹಿಡಿತ ಕಳೆದುಕೊಂಡಿರುವುದು ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಕೈ ಬರಹ, ಬರವಣಿಗೆಯ ಸುಧಾರಣೆ ಅಗತ್ಯವಿದೆ’ ಎಂದು ಸಚಿವ ನಾಗೇಶ್ ಹೇಳಿದರು.
 
‘ಕೋವಿಡ್-19 ಸೋಂಕು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಬಹುದೊಡ್ಡ ಪೆಟ್ಟು ನೀಡಿದೆ. ಇದನ್ನು ಗಂಭೀರವಾಗಿ ಅರಿತು ಕೇಂದ್ರ ಮತ್ತು ರಾಜ್ಯ ಶಿಕ್ಷಣ ಇಲಾಖೆಗಳು ಕಲಿಕಾ ಹಿನ್ನಡೆ ಕುರಿತು ಸಮೀಕ್ಷೆ ನಡೆಸಿ ವರದಿ ನೀಡಿವೆ. ಮಕ್ಕಳಲ್ಲಿ ಕಲಿಕಾ ಹಿನ್ನಡೆ ಹೆಚ್ಚಾಗಿರುವುದು ಕಂಡು ಬಂದಿದೆ. ರಾಜ್ಯದಲ್ಲಿ ಅದರ ಗಂಭೀರತೆಯನ್ನು ಅರಿತು 2022ರ ಶೈಕ್ಷಣಿಕ ವರ್ಷವನ್ನು 'ಕಲಿಕಾ ಚೇತರಿಕೆ ವರ್ಷ' ಎಂದು ಘೋಷಿಸಿ ಕಲಿಕೆಗೆ ಹೆಚ್ಚಿನ ಒತ್ತು ನೀಡಲು ಅಗತ್ಯ ಕಾರ್ಯಕ್ರಮ ರೂಪಿಸಲಾಗಿದೆ’ ಎಂದು ಸಚಿವ ನಾಗೇಶ್ ನುಡಿದರು.
 
‘ಶಾಲೆಗಳ ಮೂಲಸೌಕರ್ಯಕ್ಕಿಂತ ಹೆಚ್ಚು ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಬೇಕಾಗಿದೆ. ಶಿಕ್ಷಣದಲ್ಲಿ ಹಿಂದೆ ಬಿದ್ದಿರುವ ಮಕ್ಕಳನ್ನು ಗುರುತಿಸಿ ಅವರನ್ನು ಶೈಕ್ಷಣಿಕವಾಗಿ ಮೇಲಕ್ಕೆತ್ತಲು ಪ್ರಯತ್ನಿಸಬೇಕು’ ಎಂದು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಾಜ್ಯದ ಎಲ್ಲಾ ಜಿಲ್ಲೆಗಳ ಡಿ. ಡಿ. ಪಿ.ಐ. ಹಾಗೂ ಬಿ. ಇ. ಓ.ಗಳಿಗೆ  ಸಚಿವರು ಮನವಿ ಮಾಡಿದರು.
 
ಎಲ್ಲಾ ಶಿಕ್ಷಕರಿಗೆ ಕಲಿಕಾ ಚೇತರಿಕೆ ಕಾರ್ಯಕ್ರಮದ ಕುರಿತು ಉತ್ತಮ ತರಬೇತಿ ನೀಡುವ ಮೂಲಕ ಈ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು
 
ಕಾರ್ಯಕ್ರಮದಲ್ಲಿ ಕಲಿಕಾ ಚೇತರಿಕೆ ಕಾರ್ಯಕ್ರಮಕ್ಕೆ  ಸಂಬಂಧಿಸಿದ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಅಗತ್ಯವಾದ ಸಂಪನ್ಮೂಲ ಸಾಹಿತ್ಯ ಬಿಡುಗಡೆ ಮಾಡಲಾಯಿತು. 
 
ಕಾರ್ಯಕ್ರಮದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ. ಸೆಲ್ವಕುಮಾರ್, ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ. ವಿಶಾಲ್. ಆರ್, ಸಮಗ್ರ ಶಿಕ್ಷಣ ಕರ್ನಾಟಕ ರಾಜ್ಯ ಯೋಜನಾ ನಿರ್ದೇಶಕರಾದ ಎಂ.ದೀಪಾ ಹಾಗೂ ಅಜೀಂ ಪ್ರೇಮ್‌ಜೀ ವಿಶ್ವವಿದ್ಯಾಲಯದ ಅಸೋಸಿಯೇಟ್ ಪ್ರೊಫೆಸರ್ ರಿಷಿಕೇಶ್ ಉಪಸ್ಥಿತರಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಮಾರ್ಚ್ 21ಕ್ಕೆ 15 ಸಾವಿರ ಶಿಕ್ಷಕರ ನೇಮಕಕ್ಕೆ ಅಧಿಸೂಚನೆ