ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋಲು ಕಂಡಿದ್ದ ಜೆಡಿಎಸ್ ಪಕ್ಷ ಇದೀಗ ಬಿಬಿಎಂಪಿ ಚುನಾವಣೆಗೆ ಭರ್ಜರಿ ತಾಲಿಮು ನಡೆಸುತ್ತಿದೆ..ಮುಂಬರುವ ಬಿಬಿಎಂಪಿ ಚುನಾವಣೆಗೆ ಜೆಡಿಎಸ್ ಪಕ್ಷವನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಬೆಂಗಳೂರು ಮಹಾನಗರದ ಎಲ್ಲ 28 ಕ್ಷೇತ್ರಗಳ ಪ್ರಮುಖ ಮುಖಂಡರ ಜೊತೆ ಇಂದು ಸಮಾಲೋಚನೆ ನಡೆಸಿದರು. ಬಿಡದಿಯ ತೋಟದಲ್ಲಿ ಆಯೋಜಿಸಲಾಗಿದ್ದ ಈ ಸಭೆಯಲ್ಲಿ ಪಕ್ಷ ಸಂಘಟನೆ ಹಾಗೂ ಪಾಲಿಕೆ ಚುನಾವಣೆಯ ಬಗ್ಗೆ ಕುಮಾರಸ್ವಾಮಿ ಅವರು ಮುಖಂಡರಿಗೆ ಕೆಲ ಗಂಭೀರ ಸೂಚನೆಗಳನ್ನು ನೀಡಿದರು...ವಿಧಾನಸಭೆ ಚುನಾವಣೆಯ ಸೋಲಿನ ಕಾರಣಗಳನ್ನು ಮುಂದಿಟ್ಟುಕೊಂಡು ಕೆಲ ಮುಖಂಡರನ್ನು ತರಾಟೆಗೆ ತೆಗೆದುಕೊಂಡ ಹೆಚ್ಡಿಕೆ, ಈ ಹಿಂದೆ ನಡೆತಂದ ಗುಂಪುಗಾರಿಕೆ ಬೇಡ, ಕೆಲಸ ಮಾಡುವವರಷ್ಟೇ ಬೇಕು, ಯಾವುದೇ ಕಾರಣಕ್ಕೂ ಗುಂಪುಗಾರಿಕೆ ಸಹಿಸುವ ಪ್ರಶ್ನೆ ಇಲ್ಲ. ಯಾರು ಯಾರನ್ನೂ ಮೆಚ್ಚಿಸುವ ರೀತಿಯಲ್ಲಿ ಕೆಲಸ ಮಾಡುವ ಅಗತ್ಯವಿಲ್ಲ. ಪಕ್ಷವನ್ನು ಇನ್ನೂ ಅಧೋಗತಿಗೆ ತಳ್ಳುವುದು ಬೇಡ. ಪಕ್ಷದ ನೆಲೆ ಇರುವ ವಾರ್ಡುಗಳಲ್ಲಿ ಉತ್ತಮವಾಗಿ ಕೆಲಸ ಮಾಡಿ. ಜನರ ಸಂಪರ್ಕದಲ್ಲಿರಿ ಹಾಗೂ ಅವರಲ್ಲಿ ವಿಶ್ವಾಸ ಮೂಡಿಸಿ ಎಂದು ತಾಕೀತು ಮಾಡಿದರು.