ಬೆಂಗಳೂರು: ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜೈಲು ಸೇರಿ, ಇಂದು ಷರತ್ತುಬದ್ಧ ಜಾಮೀನಿನಲ್ಲಿ ಹೊರಬಂದಿರುವ ವಿಧಾನಪರಿಷತ್ ಸದಸ್ಯ ಸೂರಜ್ ರೇವಣ್ಣ ಅವರು ಮೊದಲ ಬಾರಿ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಜೈಲಿನಿಂದ ಬಿಡುಗಡೆಯಾದ ಸೂರಜ್ ರೇವಣ್ಣ ಅವರನ್ನು ಬರಮಾಡಿಕೊಳ್ಳಲು ಜೆಡಿಎಸ್ ಕಾರ್ಯಕರ್ತರು ಮತ್ತು ಅವರ ಬೆಂಬಲಿಗರು ಕಾದು ನಿಂತಿದ್ದರು. ಈ ವೇಳೆ ಮಾಧ್ಯಮದ ಜತೆ ಮಾತನಾಡಿದ ಅವರು, ನನ್ನ ಕುಟುಂಬದ ವಿರುದ್ಧ ಷಡ್ಯಂತ್ರ ಮಾಡಿ ತೇಜೋವಧೆ ಮಾಡಿದ್ದಾರೆ. ತೇಜೋವಧೆ ದೃಷ್ಟಿಯಿಂದ ನನ್ನ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಆದರೆ ಇದಕ್ಕೆಲ್ಲ ಹೆದರಿ ನಾವು ಓಡಿ ಹೋಗಲ್ಲ. ಈ ಪ್ರಕರಣ ಸಂಬಂಧ ಮೂರು ದಿನಗಳೊಳಗೆ ಸ್ಪಷ್ಟನೆ ನೀಡುತ್ತೇನೆ. ತನಿಖೆ ಸಂಬಂಧ ಅಧಿಕಾರಿಗಳಿಗೆ ಸಹಕಾರ ನೀಡಿದ್ದೇನೆ. ನನಗೆ ಕಾನೂನು ನ್ಯಾಯಾಂಗದ ಮೇಲೆ ಸಂಪೂರ್ಣ ವಿಶ್ವಾಸವಿದೆ ಎಂದರು.
ಈ ರೀತಿ ನನ್ನ ತೇಜೋವಧೆ ಮಾಡುವ ಮೂಲಕ ನಮ್ಮ ಕುಟುಂಬ ಮತ್ತು ಹಾಸನ ಜಿಲ್ಲೆಯ ರಾಜಕಾರಣವನ್ನ ಕುಸಿತಗೊಳಿಸಬೇಕು ಅಂದುಕೊಂಡಿದ್ದಾರೆ. ಇದರ ಹಿಂದಿರುವ ಶಕ್ತಿಗಳ ಬಗ್ಗೆ ಶೀಘ್ರವೇ ಉತ್ತರ ನೀಡ್ತೇನೆ. ಮೊದಲನೇ ದಿನದಿಂದಲೂ ತನಿಖೆಗೆ ಸಹಕರಿಸುತ್ತೇದ್ದೇನೆ. ನಾನು ಯಾವುದೇ ತಪ್ಪು ಮಾಡಿಲ್ಲ, ನಾನು ಓಡೋಗೋದಿಲ್ಲ ಎಂದರು.
ಹಾಸನದಲ್ಲಿ ನಮ್ಮ ಕುಟುಂಬದ ಮೇಲೆ ಒಂದು ಕಪ್ಪು ಚುಕ್ಕೆ ಇರ್ಲಿಲ್ಲ. ಇದು ಪ್ರಕರಣ ಅಲ್ಲ, ಇದೊಂದು ಷಡ್ಯಂತ್ರ ಎಂದರು.<>