ವಿಧಾನಸಭಾ ಚುನಾವಣೆಯಲ್ಲಿ ನಮಗೆ ನಿರೀಕ್ಷಿತ ಮಟ್ಟದ ಫಲಿತಾಂಶ ಸಿಗಲಿಲ್ಲ. ಆದರೆ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯನ್ನು ಹೋಲಿಕೆ ಮಾಡಿಕೊಂಡರೆ ಸ್ಥಳೀಯ ಮಟ್ಟದಲ್ಲಿ ನಾವು ಬಲಿಷ್ಠವಾಗಿದ್ದೇವೆ ಎಂದು ಪರಿಷತ್ ನ ಮುಖ್ಯ ಸಚೇತಕ ಹೇಳಿದ್ದಾರೆ.
ಸ್ಥಳೀಯ ಮಟ್ಟದಲ್ಲಿ ಪ್ರಭಾವಿ ನಾಯಕರಿದ್ದು, ಅವರೆಲ್ಲರೂ ಜನಪರವಾಗಿ ಕೆಲಸ ಮಾಡಿದ್ದಾರೆ. ಹೀಗಾಗಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಬಿಜೆಪಿಯ ಮೇಲಾಟ ನಡೆಯೋದಿಲ್ಲ ಎಂದು ವಿಧಾನ ಪರಿಷತ್ ನ ಮುಖ್ಯ ಸಚೇತಕ ಐವಾನ್ ಡಿಸೋಜಾ ಹೇಳಿದ್ದಾರೆ.
ಕುಂದಾಪುರ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ರಾಜ್ಯಾದ್ಯಂತ ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್ ಪ್ರಾಬಲ್ಯ ಹೊಂದಿದೆ. ಗ್ರಾಮೀಣ ಅಭಿವೃದ್ದಿ ಕನಸು ಕಂಡು ಅದನ್ನು ಸಾಕಾರಗೊಳಿಸಿದ್ದು ಕಾಂಗ್ರೆಸ್ ಪಕ್ಷ. ಪುರಸಭೆ, ನಗರಸಭೆ, ಪಟ್ಟಣ ಪಂಚಾಯತ್ ಚುನಾವಣೆಗಳಲ್ಲಿ ರಾಜ್ಯಾದ್ಯಂತ ಕಾಂಗ್ರೆಸ್ ಪರ ಅಲೆ ಮತ್ತು ಒಲವು ಇರುವುದರಿಂದ ಈ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಸಾಧಿಸುತ್ತದೆ ಎಂದರು.
ಈಗಾಗಲೇ ಚುನಾವಣಾ ಪ್ರಚಾರವನ್ನು ಪ್ರಾರಂಭಿಸಿದ್ದೇವೆ. ಪಟ್ಟಣ ಪಂಚಾಯತ್ ಅಭಿವೃದ್ದಿ, ನಗರಸಭೆ, ಪುರಸಭೆಗಳಿಗೆ ಹೆಚ್ಚು ಅನುದಾನವನ್ನು ಕೊಟ್ಟು ಅದರ ಅಭಿವೃದ್ದಿಗೆ ಕಾರಣವಾಗಿರುವುದು ಕಾಂಗ್ರೆಸ್ ಪಕ್ಷ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಜನರ ಪರವಾಗಿ ಕೆಲಸ ಮಾಡುವ ಸೂಕ್ತ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ ಎಂದರು.