ಬೆಂಗಳೂರು,ಆ.22 : ಕೋವಿಡ್ 3ನೇ ಅಲೆಯ ಆತಂಕದ ನಡುವೆಯೇ ನಾಳೆಯಿಂದ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಶಾಲಾಕಾಲೇಜುಗಳು ತೆರೆಯುತ್ತಿದ್ದು, 9ರಿಂದ 12ನೇ ತರಗತಿಗಳು ಪ್ರಾರಂಭವಾಗಲಿವೆ.ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರೌಢಶಾಲೆಗಳಲ್ಲಿನ 9 ಮತ್ತು 12ನೇ ತರಗತಿ ವಿದ್ಯಾರ್ಥಿಗಳಿಗೆ ಪೂರ್ಣ ಪ್ರಮಾಣದಲ್ಲಿ ಶಾಲಾ-ಕಾಲೇಜುಗಳು ಆರಂಭಗೊಳ್ಳಲಿವೆ.
16,850 ಪ್ರೌಢಶಾಲೆಗಳ ಜೊತೆಗೆ ಪ್ರಥಮ ಹಾಗೂ ದ್ವಿತೀಯ ಪಿಯುಸಿಯ 5,492 ಪಿಯು ಕಾಲೇಜುಗಳು ಆರಂಭವಾಗುತ್ತಿದ್ದು, ಭೌತಿಕ ತರಗತಿಗಳಿಗೆ ಹಾಜರಾಗುವ ವಿದ್ಯಾರ್ಥಿಗಳ ಸುರಕ್ಷತೆಗಾಗಿ ವಿಸ್ತೃತ ಎಸ್ಒಪಿ (ಪ್ರಮಾಣಿತ ಕಾರ್ಯಚರಣೆ ವಿಧಾನ) ಬಿಡುಗಡೆ ಮಾಡಲಾಗಿದೆ.ಶಾಲೆಗೆ ಬರುವ ವಿದ್ಯಾರ್ಥಿಗಳು ಪೋಷಕ ರು ನನ್ನ ಮಗ/ಮಗಳು ಶಾಲೆಗೆ ಹೋಗಲು ಅನುಮತಿ ಇದೆ ಎಂಬ ಒಪ್ಪಿಗೆ ಪತ್ರವನ್ನು ನೀಡಬೇಕಾಗುತ್ತದೆ. ಅನುಮತಿ ಪತ್ರ ಇಲ್ಲದೆ ಭೌತಿಕ ತರಗತಿಗೆ ಹಾಜರಾಗಲು ಅವಕಾಶ ನೀಡುವುದಿಲ್ಲ.
ಹೆಚ್ಚು ಸೋಂಕಿನ ಪ್ರಕರಣಗಳಿರುವ ಜಿಲ್ಲೆಗಳನ್ನು ಹೊರತುಪಡಿಸಿ ಬೇರೆಡೆ ಶಾಲೆ ತೆರೆಯಲಾಗುತ್ತದೆ. ಶೇ.2ಕ್ಕಿಂತ ಹೆಚ್ಚು ಪಾಸಿಟಿವಿಟಿ ಪ್ರಮಾಣ ಇರುವ ಜಿಲ್ಲೆಗಳಾದ ದಕ್ಷಿಣ ಕನ್ನಡ, ಚಿಕ್ಕಮಗಳೂರು, ಕೊಡಗು, ಉಡುಪಿ, ಹಾಸನ ಹೊರತುಪಡಿಸಿ ಮಿಕ್ಕೆಲ್ಲಾ ಕಡೆಗಳಲ್ಲೂ ಮೊದಲ ಹಂತದಲ್ಲಿ ಶಾಲೆ ಆರಂಭವಾಗಲಿದೆ.
ಶಾಲೆಗಳಲ್ಲಿ ಸುರಕ್ಷತಾ ಕ್ರಮ ಕೈಗೊಂಡಿರುವ ಕುರಿತು ವಿಡಿಯೋ ಚಿತ್ರೀಕರಣ ಮಾಡಲಾಗಿದೆ. ಪೋಷಕರ ಮನಸಲ್ಲಿರುವ ಆತಂಕವನ್ನು ದೂರ ಮಾಡುವ ಉದ್ದೇಶದಿಂದ ಶಿಕ್ಷಣ ಇಲಾಖೆ ಈ ನೂತನ ಪ್ರಯತ್ನ ಮಾಡಿದೆ. ಪೋಷಕರು ಹಾಗೂ ಮಕ್ಕಳಲ್ಲಿ ಧೈರ್ಯ ತುಂಬಲು ನಾಳೆ ಈ ವಿಡಿಯೋ ಬಿಡುಗಡೆ ಮಾಡಲಾಗುತ್ತದೆ.
ಕೇವಲ ಭೌತಿಕ ತರಗತಿಗಳು ಮಾತ್ರವಲ್ಲದೇ, ನಾಳೆಯಿಂದ ಯಥಾಪ್ರಕಾರ ಆನ್ಲೈನ್ ತರಗತಿಗಳೂ ಸಹ ನಡೆಯುತ್ತವೆ. ಆನ್ ಲೈನ್ , ಆಫ್ ಲೈನ್ ಎರಡರಲ್ಲೂ ತರಗತಿ ನಡೆಸಲಾಗುತ್ತದೆ. 50:50 ಅನುಪಾತದಲ್ಲಿ ಭೌತಿಕ ತರಗತಿ ಮಾಡಲಾಗುತ್ತದೆ.
ಮಕ್ಕಳ ಸುರಕ್ಷತೆ ಸೇರಿದಂತೆ ಕೊರೊನಾ ವೈರಸ್ ಸೋಂಕು ಹೆಚ್ಚಳವಾಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಮಾರ್ಗಸೂಚಿಯನ್ನು ಹೊರಡಿಸಲಾಗಿದ್ದು, ಕಟ್ಟನಿಟ್ಟಾಗಿ ಪಾಲನೆ ಮಾಡುವಂತೆ ಸೂಚನೆ ನೀಡಲಾಗಿದೆ.
ಶಿಕ್ಷಕರಿಗೆ ಬಿಇಒ ಕಚೇರಿಯಲ್ಲಿ ವ್ಯಾಕ್ಸಿನ್ ನೀಡಲು ವ್ಯವಸ್ಥೆ ಮಾಡಲಾಗಿದೆ. ಬ್ಯಾಚ್ ಆಧಾರದಲ್ಲಿ ಮೊದಲ ಮೂರು ದಿನ ಭೌತಿಕ ತರಗತಿ ನಡೆಯಲಿದೆ. ವಾರದ ಮೊದಲ ಮೂರು ದಿನ ಭೌತಿಕ ತರಗತಿಗೆ ಗೈರಾದ ವಿದ್ಯಾರ್ಥಿಗಳಿಗೆ, ನಂತರ ಮೂರು ದಿನ ಭೌತಿಕ ತರಗತಿ ನಡೆಸಲಾಗುತ್ತದೆ.
ನಿಯಮ ಪಾಲನೆ ಕಡ್ಡಾಯ:
ಸಾಮಾಜಿಕ ಅಂತರ ಕಾಪಾಡುವುದರ ಜೊತೆ ಆಗಾಗ ಕೈ ತೊಳೆಯಬೇಕು. ಯೋಗ, ಪ್ರಾಣಾಯಾಮ, ವ್ಯಾಯಾಮವನ್ನು ರೂಢಿ ಮಾಡಿಕೊಳ್ಳಬೇಕು. ಮನೆಯಿಂದಲೇ ಊಟದ ಡಬ್ಬಿ ಹಾಗೂ ಕಾಯಿಸಿ ಆರಿಸಿದ ನೀರನ್ನು ತರಬೇಕು. ಬಿಸಿಯಾದ ಆಹಾರ ಪದಾರ್ಥ ಸೇವಿಸಬೇಕು. ಪೆನ್, ನೋಟ್ ಬುಕ್, ನೀರಿನ ಬಾಟಲ್ ಸೇರಿದಂತೆ ಯಾವುದೇ ವಸ್ತುವನ್ನು ಸಹಪಾಠಿಗಳೊಂದಿಗೆ ಹಂಚಿಕೊಳ್ಳಬಾರದು.
ಶಾಲಾರಂಭಕ್ಕೂ ಮೊದಲು ಇಡೀ ಶಾಲೆ ಸ್ವಚ್ಛಗೊಳಿಸಿ ಸ್ಯಾನಿಟೈಸ್ ಮಾಡಬೇಕು. ಶುದ್ದ ಕುಡಿಯುವ ನೀರಿನ ಸೌಲಭ್ಯ, ಅದನ್ನು ನಿಯಮಿತವಾಗಿ ಸ್ವಚ್ಛಗೊಳಿಸಬೇಕು. ಶಾಲಾ ಕೊಠಡಿ, ಅಡುಗೆ, ದಾಸ್ತಾನು ಕೊಠಡಿ ಎಲ್ಲವನ್ನು ಶುಚಿಗೊಳಿಸಬೇಕು ಎಂದು ಇಲಾಖೆ ಆದೇಶ ಮಾಡಿದೆ.
ಶಾಲೆಗಳಿಗೆ ಸಿಎಂ ಭೇಟಿ: ನಾಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಮತ್ತು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಬೆಂಗಳೂರಿನ ಕೆಲವು ಶಾಲೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಲಿದ್ದಾರೆ. ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಆತಂಕ್ಕೆ ಒಳಗಾಗುವುದು ಬೇಡ. ಎಲ್ಲಾ ಶಿಕ್ಷಕರಿಗೆ ಈಗಾಗಲೇ ಕೊರೊನಾ ಲಸಿಕೆಯನ್ನು ನೀಡಲಾಗಿದೆ ಪೋಷಕರು ಆರೋಗ್ಯದ ದೃಷ್ಟಿಯಿಂದ ಕೊರೊನಾ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಸಲಹೆ ನೀಡಲಿದ್ದಾರೆ.
ಮಾರ್ಗಸೂಚಿ ಪಾಲನೆ ಕಡ್ಡಾಯ :
1. ಶಾಲೆಯಲ್ಲಿ ಎರಡಕ್ಕಿಂತ ಹೆಚ್ಚು ವಿದ್ಯಾರ್ಥಿಗಳಲ್ಲಿ ಸೋಂಕು ಕಂಡು ಬಂದರೆ ಒಂದು ವಾರ ಶಾಲೆ ಸೀಲ್ಡೌನ್
2. ಶೇ. 2ಕ್ಕಿಂತ ಹೆಚ್ಚು ಪಾಸಿಟಿವಿಟಿ ಪ್ರಮಾಣ ಇರುವ ಜಿಲ್ಲೆಗಳಲ್ಲಿ ಶಾಲೆ ತೆರೆಯುವಂತಿಲ್ಲ.
3. ಕೊರೊನಾ ಲಕ್ಷಣ ಕಂಡು ಬರುವ ಮಗುವನ್ನು ಶಾಲೆಗೆ ಕಳುಹಿಸುವಂತಿಲ್ಲ.
4. ಶಿಕ್ಷಕರು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಮಾಸ್ಕ್ ಧರಿಸುವುದು ಕಡ್ಡಾಯ.
5. ಶಿಕ್ಷಕರು ಹಾಗೂ ಶಾಲಾ ಸಿಬ್ಬಂದಿ ಕಡ್ಡಾಯವಾಗಿ ಕೊರೊನಾ ಲಸಿಕೆ ಪಡೆದಿರಬೇಕು.
6. ವಿದ್ಯಾರ್ಥಿಗಳು ತಮ್ಮ ಪೋಷಕರಿಂದ ಒಪ್ಪಿಗೆ ಪತ್ರ ಪಡೆದು ಶಾಲೆಗೆ ಬರಬೇಕು.
7. ವಸತಿ ಶಾಲೆ ಹಾಗೂ ವಿದ್ಯಾರ್ಥಿ ನಿಲಯಗಳ ಪ್ರವೇಶಕ್ಕೆ 72 ಗಂಟೆಗಳ ಅಂತರದಲ್ಲಿ ಪಡೆದ ಕೊವಿಡ್ ನೆಗೆಟಿವ್ ವರದಿ ಸಲ್ಲಿಸಬೇಕು.
8. ಶಾಲೆ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಕಡ್ಡಾಯ ಇಲ್ಲ.
9. ಆನ್ ಲೈನ್ ಹಾಗೂ ಆಫ್ ಲೈನ್ ಎರಡಕ್ಕೂ ಅವಕಾಶ.
10. ಕೊಠಡಿಯಲ್ಲಿ 20 ವಿದ್ಯಾರ್ಥಿಗಳಿಗೆ ಮಾತ್ರ ಕಲಿಕೆಗೆ ಅವಕಾಶ.