Publish Date: Mon, 26 Aug 2019 (18:51 IST)
Updated Date: Mon, 26 Aug 2019 (18:53 IST)
ನನಗೆ ಯಾರ ಬಗ್ಗೆಯೂ ಮಾತನಾಡೋ ಶಕ್ತಿ ಇಲ್ಲ ಅಂತ ಹೇಳೋ ಮೂಲಕ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಪ್ರಭಾವಿ ನಾಯಕ ಡಿ.ಕೆ.ಶಿವಕುಮಾರ್ ಹೊಸ ಬಾಂಬ್ ಸಿಡಿಸಿದ್ದಾರೆ.
ಮೈತ್ರಿ ಸರ್ಕಾರ ಉದ್ಭವವಾಗಿರೋದು ಕಾಂಗ್ರೆಸ್ ಪಕ್ಷದ ಹೈಕಮಾಂಡ್ ನಿಂದ. ಪಕ್ಷದ ವರಿಷ್ಠರ ತೀರ್ಮಾನಕ್ಕೆ ನಾವು ಬದ್ಧರಾಗಿರ್ತೇವೆ ಅಂತಾ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ರು. ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ಚಕ್ಕೆರೆ ಗ್ರಾಮದ ಪಟ್ಟಲದಮ್ಮ ದೇವಾಲಯದ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ್ರು.
ದೋಸ್ತಿ ಸರ್ಕಾರದ ಪತನ ಬಳಿಕ ನಾಯಕರ ಆರೋಪ- ಪ್ರತ್ಯಾರೋಪ ವಿಚಾರವಾಗಿ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿದ್ರು. ಯಾರ ಬಗ್ಗೆಯೂ ಮಾತನಾಡಲು ನನಗೆ ಶಕ್ತಿಯಿಲ್ಲ. ಪಟ್ಟಲದಮ್ಮ ದೇವಿ ಆಶೀರ್ವಾದಕ್ಕೆ ಬಂದಿದ್ದೇನೆ. ಎಲ್ಲರಿಗೂ ದುಃಖದಿಂದ ಹೊರಬರೋ ಧೈರ್ಯ ದೇವಿಯಿಂದ ಅನುಗ್ರಹವಾಗಲಿ, ದುಃಖ ದೂರ ಮಾಡಲಿ ಧೈರ್ಯ ಕೊಡಲಿ, ಆರೋಗ್ಯವಂತರಾಗಿಡಲಿ ಅಂತಾ ಹೇಳಿದ್ರು.
ಕನಕಪುರದಿಂದ ಚಿಕ್ಕಬಳ್ಳಾಪುರಕ್ಕೆ ಮೆಡಿಕಲ್ ಕಾಲೇಜು ಶಿಫ್ಟ್ ವಿಚಾರವಾಗಿ ಮಾತನಾಡಿದ ಡಿಕೆಶಿ, ಆದೇಶದ ಕಾಪಿ ನನಗಿನ್ನೂ ಬಂದಿಲ್ಲ, ಅದು ಬಂದ ನಂತರ ಮಾತನಾಡ್ತೇನೆ ಅಂದ್ರು. ನನ್ನನ್ನ ಮೈತ್ರಿ ಪಕ್ಷದವರಂತೆ ನೋಡಿಲ್ಲ, ಶತ್ರುವಂತೆ ನೋಡಿದ್ದಾರೆ ಎಂಬ ಸಿದ್ದರಾಮಯ್ಯನವರ ಹೇಳಿಕೆ ವಿಚಾರಕ್ಕೆ ಯಾವುದೇ ಪ್ರತಿಕ್ರಿಯೆ ನೀಡದೆ ಡಿ.ಕೆ.ಶಿವಕುಮಾರ್ ತೆರಳಿದ್ರು.