Publish Date: Sat, 07 Sep 2019 (17:28 IST)
Updated Date: Sat, 07 Sep 2019 (17:30 IST)
ಮಾಜಿ ಸಚಿವ ಹಾಗೂ ಪ್ರಭಾವಿ ಕಾಂಗ್ರೆಸ್ ನಾಯಕ ಡಿ.ಕೆ ಶಿವಕುಮಾರ ಅವರ ಬಂಧನದ ಸುತ್ತ ಬಿಜೆಪಿಗೆ ನಂಟಿದೆಯಾ ಅನ್ನೋ ಸುದ್ದಿಗಳು ಹರಿದಾಡುತ್ತಿವೆ.
ಡಿಕೆಶಿ ಬಂಧನಕ್ಕೂ ಬಿಜೆಪಿ ಸರಕಾರಕ್ಕೂ ಯಾವುದೇ ಸಂಬಂಧವಿಲ್ಲ. ಕಾಂಗ್ರೆಸ್ ವಿನಾಕಾರಣ ಬಿಜೆಪಿಯನ್ನು ದೂರುವುದರ ಮೂಲಕ ಇಟಾಲಿಯನ್ ಬುದ್ಧಿ ತೋರಿಸುತ್ತಿದೆ ಅಂತ ಕೇಂದ್ರ ರೈಲ್ವೆ ರಾಜ್ಯ ಖಾತೆ ಸಚಿವ ಸುರೇಶ ಅಂಗಡಿ ಟೀಕೆ ಮಾಡಿದ್ದಾರೆ.
ಇಂದಿನ ಕಾಂಗ್ರೆಸ್ ಪಕ್ಷ ಇಟಾಲಿಯನ್ ಬುದ್ಧಿ ತೋರಿಸುವುದರ ಮೂಲಕ ಇಸ್ಟ್ ಇಂಡಿಯಾ ಕಂಪನಿಯ ಧೋರಣೆಯನ್ನು ತೋರುತ್ತಿದೆ ಅಂತ ಸೋನಿಯಾ ಗಾಂಧಿ ವಿರುದ್ಧ ಪರೋಕ್ಷವಾಗಿ ಕುಟುಕಿದರು. ಮಾಜಿ ಸಚಿವ ಡಿ.ಕೆ ಶಿವಕುಮಾರ ಅವರನ್ನು ಬಂಧಿಸಿರುವುದಕ್ಕೂ ಮತ್ತು ಬಿಜೆಪಿಗೂ ಯಾವುದೇ ರೀತಿಯ ಸಂಬಂಧವಿಲ್ಲ.
ತೆರಿಗೆ ದಾಳಿ ವೇಳೆ ಅವರ ದೆಹಲಿ ನಿವಾಸದಲ್ಲಿ ಸಿಕ್ಕಿರುವ 8.59 ಕೋಟಿ ಹಣಕ್ಕೆ ಸೂಕ್ತ ದಾಖಲಾತಿ ನೀಡದಿರುವುದಕ್ಕಾಗಿ ಮತ್ತು ವಿಚಾರಣೆಗೆ ಸಹಕರಿಸದಿರುವುದಕ್ಕಾಗಿ ಬಂಧಿಸಿದ್ದಾರೆ. ಕೇವಲ ಕಾಂಗ್ರೆಸ್ ಮೇಲೆ ಮಾತ್ರ ತೆರಿಗೆ ದಾಳಿಯಾಗಿಲ್ಲ ನಮ್ಮ ಮೇಲೂ ಆಗಿವೆ. ಆದರೆ ನಾವು ಕಾಂಗ್ರೆಸ್ಸಿಗರಂತೆ ಸಾರ್ವಜನಿಕ ಆಸ್ತಿ ಹಾಳು ಮಾಡಿಲ್ಲ. ಬಸ್ಸು ಮತ್ತು ಸಾರ್ವಜನಿಕ ಆಸ್ತಿ ಹಾಳು ಮಾಡಿತ್ತಿರುವುದು ದುರಾದೃಷ್ಟಕರ ಎಂದ್ರು.