ಬೆಂಗಳೂರು: ಕಾಂಗ್ರೆಸ್ ಸರ್ಕಾರ ಮಹಿಳೆಯರಿಗೆ ಶಕ್ತಿ ತುಂಬಲು ಅನೇಕ ಕಾರ್ಯಕ್ರಮ ರೂಪಿಸಿದೆ. ಪಕ್ಷದ ಆಚಾರ ವಿಚಾರ ಹಾಗೂ ಯೋಜನೆಗಳನ್ನು ರಾಜ್ಯದ ಮೂಲೆ ಮೂಲೆಯಲ್ಲಿ ಪ್ರಚಾರ ಮಾಡಿ, ಆಗ 2028ರಲ್ಲೂ ನಮ್ಮ ಪಕ್ಷ ಅಧಿಕಾರಕ್ಕೆ ಬಂದೇ ಬರುತ್ತದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ಕಾಂಗ್ರೆಸ್ ಕಚೇರಿಯ ಭಾರತ ಜೋಡೋ ಭವನದಲ್ಲಿ ಗುರುವಾರ ನಡೆದ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾಗಿ ಶ್ರೀಮತಿ ಸೌಮ್ಯ ರೆಡ್ಡಿ ಅವರ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗವಹಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು, ಮಹಿಳೆಯರ ಸಬಲೀಕರಣಕ್ಕೆ ಕಾಂಗ್ರೆಸ್ ಪಕ್ಷ ಹೇಗೆ ಕಾರ್ಯಕ್ರಮ ರೂಪಿಸುತ್ತಿದೆ ಎಂದು ತಿಳಿಸಿದರು.
“ಕಾಂಗ್ರೆಸ್ ಪಕ್ಷ ಯಾವುದೇ ಕಾರ್ಯಕ್ರಮ ರೂಪಿಸಿದರು ಅದು ಮಹಿಳಾ ಕೇಂದ್ರಿತ ಕಾರ್ಯಕ್ರಮಗಳಾಗಿರುತ್ತವೆ. ಮಹಿಳೆಯರಿಗೆ ಶಕ್ತಿ ತುಂಬಲು ನಮ್ಮ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದೆ. ಇದನ್ನು ಬಳಸಿಕೊಂಡು ಈ ಯೋಜನೆಗಳ ಫಲಾನುಭವಿಗಳಿಗೆ ಕಾಂಗ್ರೆಸ್ ಸರ್ಕಾರದ ಕೊಡುಗೆಗಳನ್ನು ಮನದಟ್ಟು ಮಾಡಿ. ಆಮೂಲಕ ತಳಮಟ್ಟದಲ್ಲಿ ಕಾಂಗ್ರೆಸ್ ಪಕ್ಷವನ್ನು ಸಂಘಟನೆ ಮಾಡಿ. ಆಗ ಬಿಜೆಪಿಯವರು ಏನೇ ತಿಪ್ಪರಲಾಗ ಹಾಕಿದರೂ 2028ಕ್ಕೆ ನಮ್ಮದೇ ಸರ್ಕಾರ ಅಧಿಕಾರಕ್ಕೆ ಬರುತ್ತದೆ” ಎಂದು ತಿಳಿಸಿದರು.
“ಇಂದು ನಮ್ಮ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದಾರೆ. ನಾವೆಲ್ಲರೂ ಅವರ ಕೈ ಬಲಪಡಿಸಬೇಕು. ನಮ್ಮ ಗುರಿ 2028ರ ಚುನಾವಣೆ. ಆನಂತರ 2029ರ ಚುನಾವಣೆ. ದೇಶದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತರಬೇಕು. ನಾನು ಎಷ್ಟು ದಿನ ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿ ಇರುತ್ತೇನೋ ಗೊತ್ತಿಲ್ಲ. ಆದರೆ ಅಧಿಕಾರದಲ್ಲಿ ಇರುವಾಗ ನಾವು ಏನು ಮಾಡುತ್ತೇವೆ ಎಂಬುದು ಮುಖ್ಯ. ನಮ್ಮ ಸಂಘಟನೆ ಇತಿಹಾಸದ ಪುಟಕ್ಕೆ ಹೋಗುತ್ತದೆ” ಎಂದು ತಿಳಿಸಿದರು.
ನನಗೆ ರಾಜಕೀಯ ಚದುರಂಗ ಗೊತ್ತಿದೆ:
“ಯಾವ ರೀತಿ ರಾಜಕಾರಣ ಮಾಡಬೇಕು, ಅವರು ಏನೇ ಚದುರಂಗ ಆಟವಾಡಿದರೂ ಹೇಗೆ ಚೆಕ್ ಮೇಟ್ ನೀಡಬೇಕು ಎಂದು ನನಗೆ ಗೊತ್ತಿದೆ. ರಾಜಕಾರಣ ಫುಟ್ಬಾಲ್ ಅಲ್ಲ. ಚದುರಂಗದಾಟ. ಆ ಆಟ ನನಗೆ ಗೊತ್ತಿದೆ. ನೀವು ಮಹಿಳೆಯರು ಪಂಚಾಯ್ತಿ, ಬೂತ್ ಮಟ್ಟದಲ್ಲಿ ಮಹಿಳೆಯರನ್ನು ಸಂಘಟನೆ ಮಾಡಿ. ಮತ್ತೆ ನಾವು ರಾಜ್ಯದಲ್ಲಿ ಅಧಿಕಾರಕ್ಕೆ ಯಾಕೆ ಬರುವುದಿಲ್ಲ ನೋಡುತ್ತೇನೆ” ಎಂದು ತಿಳಿಸಿದರು.
“ರಾಜೀವ್ ಗಾಂಧಿ ಅವರು ಸಂವಿಧಾನಕ್ಕೆ 72-73ನೇ ತಿದ್ದುಪಡಿ ತರುವ ಮೂಲಕ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿ ನೀಡಲಾಗಿದೆ. ಸ್ಥಳೀಯ ಮಟ್ಟದಲ್ಲಿ ಮೂರ್ಲಾಲ್ಕು ಬಾರಿ ಜನರಿಂದ ಆಯ್ಕೆಯಾಗಿರುವ ಮಹಿಳೆಯರನ್ನು ಗುರುತಿಸಿ, ಅವರನ್ನು ದೊಡ್ಡ ಮಟ್ಟದ ನಾಯಕಿಯನ್ನಾಗಿ ಮಾಡುವ ಕೆಲಸ ಮಾಡಿದರೆ ಸಾಕು. ಆಕೆಗೆ ಜನರ ಕಷ್ಟ ಸುಖ ಅರಿವಿದೆ. ಸಹಕಾರ ಕ್ಷೇತ್ರ, ಸ್ತ್ರೀ ಶಕ್ತಿ ಸಂಘಟನೆಗಳನ್ನು ಮಾಡಿದ್ದೇವೆ.
ಮಹಿಳೆಯರಿಗೆ ಆದ್ಯತೆ ನೀಡುವುದು ನಮ್ಮ ಸಂಸ್ಕೃತಿ:
ನಾವು ಪ್ರತಿ ಹಳ್ಳಿಯಲ್ಲಿ ಗ್ರಾಮದೇವತೆಗಳಿಗೆ ನಾವು ಪೂಜೆ ಮಾಡುತ್ತೇವೆ. ನಾಡದೇವತೆ ಎಂದು ತಾಯಿ ಚಾಮುಂಡೇಶ್ವರಿ ದೇವಿಯನ್ನು ಪೂಜಿಸುತ್ತೇವೆ. ನಾವು ವೆಂಕಟೋಶ್ವರ ದೇವರನ್ನು ಲಕಷ್ಮಿ ವೆಂಕಟೇಶ್ವರ ಎನ್ನುತ್ತೇವೆ. ಗಣೇಶನಿಗೆ ಗೌರಿ ಗಣೇಶ, ಶಿವನನ್ನು ಪಾರ್ವತಿ ಪರಮೇಶ್ವರ ಎಂದು ಕರೆಯುತ್ತೇವೆ. ಅಷ್ಟರ ಮಟ್ಟಿಗೆ ನಾವು ಮಹಿಳೆಯರಿಗೆ ಪ್ರಾತಿನಿಧ್ಯ, ಗೌರವ ನೀಡುತ್ತೇವೆ. ಇದು ನಮ್ಮ ಸಂಸ್ಕೃತಿ.
ಮಹಿಳೆ ಹುಟ್ಟುತ್ತಲೇ ನಾಯಕತ್ವ ಗುಣ ಹೊಂದಿರುತ್ತಾಳೆ ಎಂದು ನಾವು ನಾ ನಾಯಕಿ ಕಾರ್ಯಕ್ರಮ ಮಾಡಿದ್ದೇವೆ. ನೀವು ರಾಜಕೀಯಕ್ಕೆ ಬರಲು ಎಷ್ಟು ಕಷ್ಟವಿದೆ ಎಂದು ನನಗೆ ಅರಿವಿದೆ. ನಾನು ಮಹಿಳೆಯರಿಗೆ ನಾಯಕತ್ವ ನೀಡುವ ಪ್ರಯತ್ನ ಮಾಡಿದಾಗ ನನ್ನ ನೋಡಿ ಕೆಲವರು ಆಡಿಕೊಂಡರು. ನನ್ನ ಈ ವಿಚಾರವನ್ನು ನಾನು ರಾಷ್ಟ್ರ ಮಟ್ಟದಲ್ಲೂ ಚರ್ಚೆ ಮಾಡಿದ್ದೇನೆ. ಮುಂದೆ ಮಹಿಳೆಯರಿಗೆ ರಾಜಕೀಯ ಮೀಸಲಾತಿ ದೊರೆಯಲಿದ್ದು, ಅದಕ್ಕೆ ನಾನು ಅಡಿಪಾಯ ಹಾಕಿದ್ದೇನೆ.
ಅರಮನೆ ಮೈದಾನದಲ್ಲಿ ಪ್ರಿಯಾಂಕಾ ಗಾಂಧಿ ಅವರ ಸಮ್ಮುಖದಲ್ಲಿ ನಾ ನಾಯಕಿ ಕಾರ್ಯಕ್ರಮ ಮಾಡಿದೆ. ನಮ್ಮ ಘೋಷಣೆ ಕೇವಲ ಮಾತಿಗೆ ಸೀಮಿತವಾಗಿರಬಾರದು ಎಂದು ಅವರು ಸಿಎಂ ಹಾಗೂ ನನ್ನಿಂದ ಚೆಕ್ ಗೆ ಸಹಿ ಹಾಕಿಸಿದರು. ಆ ಕಾರ್ಯಕ್ರಮದಲ್ಲಿ ಮಹಿಳೆಯರು ವೇದಿಕೆ ಮೇಲಿದ್ದರು, ಗಂಡಸರು ವೇದಿಕೆ ಕೆಳಗೆ ಕೂತಿದ್ದರು. ನಿಮಗೆ ಸ್ಥಾನ ಸಿಕ್ಕ ತಕ್ಷಣ ಯಾವುದೇ ಕಾರಣಕ್ಕೂ ನಾಯಕತ್ವ ಬಿಡಬೇಡಿ. ಪಂಚಾಯ್ತಿ ಮಟ್ಟದ್ದಾಗಿರಲಿ ಅಥವಾ ಬೇರೆ ಆಗಿರಲಿ. ನೀವು ಬಂದ ಕ್ಷಣದಲ್ಲಿ ನಿಗಮ ಮಂಡಳಿ ಸ್ಥಾನ ಬಯಸಲು ಆಗುವುದಿಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ ಆರು ಮಹಿಳೆಯರಿಗೆ ಸ್ಥಾನ ನೀಡಿದ್ದೆವು.
ರಾಮಲಿಂಗಾ ರೆಡ್ಡಿ ಜತೆ ಚರ್ಚೆ ಮಾಡದೇ ಸೌಮ್ಯ ಅವರ ಹೆಸರು ಸೂಚಿಸಿದೆ:
ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸ್ಥಾನಕ್ಕೆ ನಾವು ನಾಲ್ಕೈದು ಹೆಸರು ಚರ್ಚೆ ಮಾಡಿದ್ದೆವು. ನಾನು ಸೌಮ್ಯರೆಡ್ಡಿ ಅವರ ಹೆಸರು ಸೂಚಿಸುವಾಗ ಆಕೆಯ ಜತೆಗಾಗಲಿ, ಅವರ ತಂದೆ ರಾಮಲಿಂಗಾ ರೆಡ್ಡಿ ಅವರ ಜತೆಗಾಗಲಿ ಚರ್ಚೆ ಮಾಡಲಿಲ್ಲ. ಸೌಮ್ಯ ರೆಡ್ಡಿ ಅವರು ಲೋಕಸಭೆ ಟಿಕೆಟ್ ಅನ್ನು ನೀಡಿರಲಿಲ್ಲ. ನಾನು ಮುಖ್ಯಮಂತ್ರಿಗಳು ಹಾಗೂ ಪ್ರಧಾನ ಕಾರ್ಯದರ್ಶಿಗಳು ಬಲವಂತ ಮಾಡಿ ಚುನಾವಣೆಗೆ ಸ್ಪರ್ಧಿಸುವಂತೆ ಮಾಡಿದ್ದೆವು. ಸೌಮ್ಯರೆಡ್ಡಿ ಅವರನ್ನು ಈ ಸ್ಥಾನಕ್ಕೆ ಆಯ್ಕೆ ಮಾಡಿದಾಗ ಅನೇಕರು ಟೀಕೆ ಮಾಡಿದರು. ಆದರೂ ನೀಡಿದ್ದೇವೆ. ಕಾರಣ ಬೆಂಗಳೂರಿನಲ್ಲಿ ರಾಜಕಾರಣ ಮಾಡುವುದು ಅಷ್ಟು ಸುಲಭವಲ್ಲ. ಪಕ್ಷಕ್ಕಾಗಿ ಅವರಿಗೆ ಜವಾಬ್ದಾರಿ ನೀಡುತ್ತಿದ್ದೇವೆ.
ಅವಕಾಶ ಇರುವವನನ್ನು ಅದೃಷ್ಟವಂತ ಎಂದು ಕರೆಯುತ್ತಾರೆ. ಆದರೆ ಅವಕಾಶ ರೂಪಿಸಿಕೊಳ್ಳುವವರನ್ನು ಬುದ್ಧಿವಂತ ಎಂದು ಕರೆಯುತ್ತಾರೆ. ಹೀಗಾಗಿ ನೀವು ಅವಕಾಶಗಳನ್ನು ರೂಪಿಸಿಕೊಳ್ಳಬೇಕು. ದೇವರು ವರ ಹಾಗೂ ಶಾಪ ನೀಡುವುದಿಲ್ಲ. ಕೇವಲ ಅವಕಾಶ ಮಾತ್ರ ನೀಡುತ್ತಾನೆ. ಅವಕಾಶವನ್ನು ನಾವು ಸರಿಯಾಗಿ ಬಳಸಿಕೊಳ್ಳಬೇಕು.
ಮಹಾತ್ಮಾ ಗಾಂಧಿ ಅವರ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನಕ್ಕೆ ನೂರು ವರ್ಷಗಳು ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ನಾವು ವಿಶೇಷ ಕಾರ್ಯಕ್ರಮ ರೂಪಿಸುತ್ತಿದ್ದೇವೆ. ಸರ್ಕಾರ ಹಾಗೂ ಪಕ್ಷದ ವತಿಯಿಂದ ಪ್ರತ್ಯೇಕ ಕಾರ್ಯಕ್ರಮ ರೂಪಿಸುತ್ತೇವೆ. ಈಗಾಗಲೇ ಗಾಂಧಿ ಭಾರತ ಹಾಗೂ ಗಾಂಧಿ ನಡಿಗೆ ಕಾರ್ಯಕ್ರಮ ನಡೆಸಿದ್ದೇವೆ.
ನಿಮ್ಮ ಶ್ರಮ, ಹೋರಾಟಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ. ನೀವು ಕೂಡ ಬೇರೆ ಮಹಿಳೆಯರನ್ನು ಸೇರಿಸಿಕೊಂಡು ಸಂಘಟನೆ ಮಾಡಬೇಕು. ಪುರುಷರಿಗಿಂತ ಮಹಿಳೆಯರು ಧೈರ್ಯವಂತರು. ನಿಮಗೆ ಶಕ್ತಿ ತುಂಬಬೇಕು ಎಂಬ ಕಾರಣಕ್ಕೆ ನಮ್ಮ ಸರ್ಕಾರ ಮಹಿಳೆಯನ್ನು ಗಮನದಲ್ಲಿಟ್ಟುಕೊಂಡು ಐದು ಗ್ಯಾರಂಟಿ ಘೋಷಣೆ ಮಾಡಿತು. ಐದು ಬೆರಳು ಸೇರಿ ಕೈ ಮುಷ್ಠಿಯಾಯಿತು, ಐದು ಗ್ಯಾರಂಟಿ ಸೇರಿ ಕೈ ಗಟ್ಟಿಯಾಯಿತು. ಇಡೀ ದೇಶದಲ್ಲಿ ಇಂತಹ ಯೋಜನೆ ಜಾರಿಗೆ ತಂದಿದ್ದು ನಾವೆ ಮೊದಲು.
ನಮ್ಮ ಗ್ಯಾರಂಟಿ ಯೋಜನೆಯಿಂದ ದೇಶ ನಾಶವಾಗುತ್ತದೆ ಎಂದು ಹೇಳುತ್ತಿದ್ದ ಬಿಜೆಪಿಯವರು ಬೇರೆ ರಾಜ್ಯಗಳ ಚುನಾವಣೆಯಲ್ಲಿ ಘೋಷಣೆ ಮಾಡುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ಈಗಾಗಲೇ ಮೂರು ತಿಂಗಳು ಹಣವನ್ನು ಹಾಕಿದ್ದಾರೆ.
ನಾವು ಮಹಿಳೆಯರಿಗೆ ನೀಡಿರುವ ಕಾರ್ಯಕ್ರಮವನ್ನು ಜನರಿಗೆ ತಲುಪಿಸಬೇಕು. ಇದಕ್ಕೆ ರಚಿಸಿರುವ ಸಮಿತಿಗೆ ಪುಷ್ಪಾ ಅಮರನಾಥ್ ಅವರು ಉಪಾಧ್ಯಕ್ಷರಾಗಿದ್ದಾರೆ. ನೀವು ಜನರಿಗೆ ಈ ಯೋಜನೆಗಳ ಬಗ್ಗೆ ಪದೇ ಪದೆ ವಿಚಾರ ತಿಳಿಸಿ ಕಾಂಗ್ರೆಸ್ ಪಕ್ಷದ ಕಡೆ ಅವರ ಒಲವು ಮೂಡುವಂತೆ ಮಾಡಬೇಕು.
ನಮ್ಮ ರಾಷ್ಟ್ರೀಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಬಂದಿದ್ದಾರೆ. ಅವರು ಮಹಿಳಾ ಕಾಂಗ್ರೆಸ್ ಸದಸ್ಯತ್ವ ಅಭಿಯಾನ ಆರಂಭಿಸಿದ್ದಾರೆ. ನೀವು ಕೂಡ ಸದಸ್ಯತ್ವ ಮಾಡಿ. ಯಾರು ಹೆಚ್ಚಿಗೆ ಸದಸ್ಯತ್ವ ಮಾಡುತ್ತೀರೋ ಅವರಿಗೆ ಸ್ಥಾನಮಾನ ನೀಡಲಾಗುವುದು. ರಾಜ್ಯ ಮಟ್ಟ, ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಅಧಿಕಾರ ನೀಡುತ್ತಿದ್ದೇವೆ. ಪ್ರತಿ ಮೂವರಲ್ಲಿ ಓಬ್ಬ ಮಹಿಳೆಗೆ ಅಧಿಕಾರ ನೀಡಲು ಸಿಎಂ ಹಾಗೂ ನಾನು ತೀರ್ಮಾನಿಸಿದ್ದೇವೆ. ಎಲ್ಲರಿಗೂ ಒಂದೇ ಬಾರಿ ನೀಡಲು ಸಾಧ್ಯವಾಗದಿದ್ದರೂ ಹಂತ ಹಂತವಾಗಿ ನೀಡುತ್ತೇವೆ.
ಬ್ಲಾಕ್ ಮಟ್ಟದಿಂದ ಮಂತ್ರಿ ಸ್ಥಾನದವರೆಗೆ ಬೆಳೆಯಲು ನಿಮಗೆ ಸಾಮರ್ಥ್ಯವಿದೆ. ನೀವು ನಿಮ್ಮ ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ. ಸಿದ್ದರಾಮಯ್ಯ ಅವರ ಕಳೆದ ಸರ್ಕಾರದಲ್ಲಿ ಕೊಟ್ಟ ಕಾರ್ಯಕ್ರಮ, ಈ ಸರ್ಕಾರದಲ್ಲಿ ನೀಡಿರುವ ಗ್ಯಾರಂಟಿ ಯೋಜನೆಗಳು ದೇಶದಲ್ಲಿ ಯಾವುದೇ ಸರ್ಕಾರ ನೀಡಿಲ್ಲ. ನಮ್ಮ ಆಚಾರ, ವಿಚಾರ, ಸಿದ್ಧಾಂತಗಳು ಪ್ರಚಾರವಾಗಬೇಕು. ನಾವು ನಮ್ಮ ಪಕ್ಷದ ಪ್ರಣಾಳಿಕೆ ಸಿದ್ಧಪಡಿಸುವ ಮುನ್ನ ತಮಿಳುನಾಡಿನ ಪ್ರಣಾಳಿಕೆ ತರಿಸಿಕೊಂಡಿದ್ದೆ. ಅಲ್ಲಿ ಚೆನ್ನೈ ನಗರ ಪ್ರದೇಶದಲ್ಲಿ ಮಾತ್ರ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಕಲ್ಪಿಸಿದ್ದರು. ನಾವು ಇಡೀ ರಾಜ್ಯದಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ನೀಡಿದ್ದೇವೆ.
ಈ ಗ್ಯಾರಂಟಿ ಯೋಜನೆಗಳಿಗೆ 56 ಸಾವಿರ ಕೋಟಿ ಮೀಸಲಿಟ್ಟಿದ್ದೇವೆ. ಇದು ಕಡಿಮೆ ಮೊತ್ತದ ಹಣವಲ್ಲ. ಬಿಜೆಪಿಯವರು ಭಾವನೆ ಮೇಲೆ ರಾಜಕಾರಣ ಮಾಡಿದರೆ, ನಾವು ಬದುಕಿನ ಮೇಲೆ ರಾಜಕಾರಣ ಮಾಡುತ್ತೇವೆ. ಬಿಜೆಪಿ ಆಡಳಿತದಿಂದ ಬೆಲೆ ಏರಿಕೆ ಗಗನಕ್ಕೇರಿದರೆ, ಆದಾಯ ಪಾತಾಳಕ್ಕೆ ಕುಸಿಯಿತು. ಇದಕ್ಕಾಗಿಯೇ ಗ್ಯಾರಂಟಿ ಯೋಜನೆ ರೂಪಿಸಿದೆವು. ಅಧಿಕಾರ ವಹಿಸಿಕೊಂಡ ಮೊದಲ ದಿನವೇ ಈ ಯೋಜನೆಗಳ ಜಾರಿಗೆ ಸರ್ಕಾರಿ ಆದೇಶ ಹೊರಡಿಸಿದೆವು.
ನಿಮಗೆ ಯಾರೇ ಸಹಕಾರ ನೀಡದಿದ್ದರೂ ನಾನು ಅವರಿಗೆ ಮಾರ್ಗದರ್ಶನ ನೀಡುತ್ತೇನೆ. ಜಿಲ್ಲಾ ಮಟ್ಟದ ಕಾರ್ಯಕ್ರಮಗಳಲ್ಲೂ ಮಹಿಳಾ ನಾಯಕಿಯರನ್ನು ವೇದಿಕೆಯ ಮೊದಲ ಸಾಲಿನಲ್ಲಿ ಕೂರಿಸಲು ತಿಳಿಸುತ್ತೇನೆ. ನಿಮ್ಮನ್ನು ಗೌರವದಿಂದ ಕಾಣುವವರೆಗೂ ನಾವು ತೊಂದರೆ ಎದುರಿಸುವುದು ನಿಲ್ಲಲ್ಲ.
ಸೋನಿಯಾ ಗಾಂಧಿ ಅವರನ್ನು ಸ್ಮರಿಸಬೇಕು
ಸೋನಿಯಾ ಗಾಂಧಿ ಅವರು ಇಂದಿರಾ ಗಾಂಧಿ ಅವರ ನುಡಿಮುತ್ತುಗಳು ಎಂಬ ಪುಸ್ತಕ ಬರೆದಿದ್ದು, ಅದರ ಕಾಪಿರೈಟ್ ರಾಹುಲ್ ಗಾಂಧಿ ಅವರ ಬಳಿ ಇದೆ. ಆ ಪುಸ್ತಕವನ್ನು ನಾನು ತರ್ಜುಮೆ ಮಾಡಿಸಿದ್ದು, ನೀವೆಲ್ಲರೂ ಇಂದಿರಾ ಗಾಂಧಿ ಅವರ ನುಡಿಮುತ್ತುಗಳನ್ನು ಓದಬೇಕು. ಅವಕಾಶ ನಮ್ಮನ್ನು ಹುಡುಕಿಕೊಂಡು ಬರುವುದಿಲ್ಲ, ನಾವೇ ಅವಕಾಶಗಳನ್ನು ಸೃಷ್ಟಿಸಿಕೊಳ್ಳಬೇಕು ಎಂದು ಇಂದಿರಾ ಗಾಂಧಿ ಹೇಳಿದ್ದಾರೆ.
ನಮ್ಮ ಉಕ್ಕಿನ ಮಹಿಳೆ ಇಂದಿರಾ ಗಾಂಧಿ. ನೀವೆಲ್ಲರೂ ಸೋನಿಯಾ ಗಾಂಧಿ ಅವರನ್ನು ಗಮನಿಸಬೇಕು. ದೇಶದಲ್ಲಿ ಪ್ರಧಾನಮಂತ್ರಿಯಾಗುವ ಅವಕಾಶವಿದ್ದರೂ ಅದನ್ನು ತ್ಯಾಗ ಮಾಡಿದ್ದರೆ ಅದು ಸೋನಿಯಾ ಗಾಂಧಿ. ದೇಶದ ಆರ್ಥಿಕ ತಜ್ಞ ಮನಮೋಹನ್ ಸಿಂಗ್ ಅವರಿಗೆ ತಮ್ಮ ಸ್ಥಾನವನ್ನು ಬಿಟ್ಟುಕೊಟ್ಟರು. ಅವರ ಹೆಸರು ಕೇಳಿದರೆ ನಾನು ಭಾವುಕನಾಗುತ್ತೇನೆ. ಬಿಜೆಪಿಯವರು ನನ್ನನ್ನು ತಿಹಾರ್ ಜೈಲಿಗೆ ಹಾಕಿದಾಗ, ಆ ತಾಯಿ ಜೈಲಿಗೆ ಬಂದು ನನಗೆ ಧೈರ್ಯ ತುಂಬಿದರು. ಅದನ್ನು ನಾನು ಎಂದಿಗೂ ಮರೆಯುವುದಿಲ್ಲ.
ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮೋನೋತ್ಸವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ 100 ಬ್ಲಾಕ್ ಮಟ್ಟದ ಕಾಂಗ್ರೆಸ್ ಕಚೇರಿ ನಿರ್ಮಿಸಲು ತೀರ್ಮಾನ ಮಾಡಿದ್ದೇವೆ. ಸಚಿವರು, ಶಾಸಕರಿಗೆ ಜವಾಬ್ದಾರಿ ವಹಿಸಿದ್ದೇನೆ. ಈ ಕಚೇರಿಗಳು ನಮ್ಮ ಪಾಲಿಗೆ ದೇವಾಲಯವಾಗಿದೆ. ಅವುಗಳ ನಿರ್ಮಾಣದ ಕೆಲಸಕ್ಕೆ ಮುಂದಾಗಿದ್ದೇವೆ. ಸೌಮ್ಯರೆಡ್ಡಿ ಅವರು ಶುಭಗಳಿಗೆಯಲ್ಲಿ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಅವರಿಗೆ ಒಳ್ಳೆಯದಾಗಲಿ ಎಂದು ಹಾರೈಸುತ್ತೇನೆ. ಕಾಂಗ್ರೆಸ್ ಪಕ್ಷ ಯಾವುದೇ ಕಾರ್ಯಕ್ರಮ ಮಾಡಿದರು ಅದು ಮಹಿಳೆಯರ ಪರವಾದ ಯೋಜನೆಯಾಗಿರುತ್ತದೆ. ನೀವು ಧೈರ್ಯವಾಗಿ ನುಗ್ಗಿ ಪಕ್ಷ ಸಂಘಟನೆ ಮಾಡಿ.