Daily Horoscope

Select Your Language

Notifications

webdunia
webdunia
webdunia
webdunia

ಮತಗಳ್ಳತನಕ್ಕೆ ಕುಮ್ಮಕ್ಕು; ಅರ್ಜಿ ನಮೂನೆ 7ರ ದುರುಪಯೋಗದ ವಿರುದ್ಧ ಪೊಲೀಸ್ ತನಿಖೆ: ಸಿಎಂ ಡಿ ಕೆ ಶಿವಕುಮಾರ್

Karnataka Congress
ಬೆಂಗಳೂರು, ನ.05: "ಮತಗಳ್ಳತನಕ್ಕೆ ಕುಮ್ಮಕ್ಕು ನೀಡಿದ ಹಾಗೂ ಅರ್ಜಿ ನಮೂನೆ 7ನ್ನು ದುರುಪಯೋಗಪಡಿಸಿಕೊಂಡವರ ವಿರುದ್ಧ ಪೊಲೀಸ್ ತನಿಖೆ ನಡೆಸಲು ನಮ್ಮ ಸರ್ಕಾರ ಮುಂದಾಗಲಿದೆ" ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಹೇಳಿದರು.
 
ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಇಂಡಿಯಾ ಒಕ್ಕೂಟ ಗುರುವಾರ ಹಮ್ಮಿಕೊಂಡಿದ್ದ "ಮತಗಳ್ಳತನ ನಿಲ್ಲಿಸಿ, ದೇಶ ಉಳಿಸಿ" ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು. ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. 
 
"ನಾವು ಕೇವಲ ಚುನಾವಣಾ ಆಯೋಗದ ವಿರುದ್ಧ ಮಾತ್ರ ಹೋರಾಟ ಮಾಡುತ್ತಿಲ್ಲ. ಚುನಾವಣಾ ಆಯೋಗದ ಹಿಂದೆ ಇರುವ ಬಿಜೆಪಿಯ ಹುನ್ನಾರದ ವಿರುದ್ಧವೂ ಹೋರಾಟ ಮಾಡುತ್ತಿದ್ದೇವೆ" ಎಂದರು.
 
"ಜನಸಾಮಾನ್ಯರ ಮತಗಳನ್ನು ಉಳಿಸುವ ವಿಚಾರದಲ್ಲಿ ನಮಗೆ ಬದ್ಧತೆಯಿದೆ. ಚುನಾವಣಾ ಆಯೋಗದಿಂದ ನೇಮಕಗೊಂಡಿರುವ ಎಲ್ಲ ಬಿಎಲ್‌ಒಗಳಿಗೆ ಹೇಳಲು ಬಯಸುತ್ತೇನೆ. ಮತಗಳ್ಳತನಕ್ಕೆ ಯಾರು ಕುಮ್ಮಕ್ಕು ನೀಡಿದ್ದಾರೆ, ಯಾರು ಅರ್ಜಿಗಳನ್ನು ತಂದುಕೊಟ್ಟಿದ್ದಾರೆ ಎಂಬುದಕ್ಕೆ ಸಿಸಿಟಿವಿ ದಾಖಲೆಗಳಿವೆ. ಈ ಬಗ್ಗೆ ಪ್ರಕರಣ ದಾಖಲಿಸಿ ಸಮಾಜಕ್ಕೆ ನ್ಯಾಯ ಒದಗಿಸಲಾಗುವುದು" ಎಂದು ತಿಳಿಸಿದರು.
 
"ಬಿಜೆಪಿ ಮತಗಳ್ಳತನ ಮಾಡಿದೆ. ಅಂತಹ ಪಕ್ಷದ ವಿರುದ್ಧ ಕಾನೂನು ಚೌಕಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಈ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಮ್ಮ ಮತ ನಮ್ಮ ಹಕ್ಕು, ನಮ್ಮ ಮತ ನಮ್ಮ ಬದುಕು. ನಮ್ಮ ಹಕ್ಕಿಗಾಗಿ ಇಂದು ನಾವೆಲ್ಲರೂ ಹೋರಾಟ ಮಾಡಲು ಇಲ್ಲಿ ಸೇರಿದ್ದೇವೆ" ಎಂದು ಹೇಳಿದರು.
 
"ಫ್ರೀಡಂ ಪಾರ್ಕ್ ದೇಶದ ರಾಜಕೀಯ ಬದಲಾವಣೆಯ ಹಾಗೂ ಐತಿಹಾಸಿಕ ಹೋರಾಟಗಳ ಸಾಕ್ಷಿಯಾಗಿದೆ. ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯ ಅವರೊಂದಿಗೆ ಈ ಹಿಂದೆ ಇದೇ ಸ್ಥಳದಲ್ಲಿ ಮಹಾದೇವಪುರ, ಗಾಂಧಿನಗರ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ನಡೆದ ಮತದಾರರ ಹಕ್ಕುಗಳ ಉಲ್ಲಂಘನೆಯ ವಿರುದ್ಧ ಹೋರಾಟ ಆರಂಭಿಸಲಾಗಿತ್ತು. ಆ ಹೋರಾಟ ದೇಶಕ್ಕೆ ದೊಡ್ಡ ಸಂದೇಶ ನೀಡಿತ್ತು" ಎಂದು ಸ್ಮರಿಸಿದರು.
 
"ಬೆಂಗಳೂರಿನಲ್ಲಿ ಚಿಲುಮೆ ಸಂಸ್ಥೆಯ ಮೂಲಕ ಬಿಜೆಪಿ ಸರ್ಕಾರ ತನ್ನ ಕಾರ್ಯಕರ್ತರಿಗೆ ಬಿಎಲ್‌ಒ ಅಧಿಕಾರ ನೀಡಿಸಿ, ಲಕ್ಷಾಂತರ ಮತಗಳನ್ನು ತೆಗೆದುಹಾಕುವ ಮತ್ತು ಹೊಸ ಮತದಾರರನ್ನು ಸೇರ್ಪಡೆಗೊಳಿಸುವ ಪ್ರಕ್ರಿಯೆಯಲ್ಲಿ ಅಕ್ರಮ ಎಸಗಲು ಸಂಚು ರೂಪಿಸಿತ್ತು. ಈ ವಿಚಾರವಾಗಿ ಕಾಂಗ್ರೆಸ್ ನಾಯಕರು ದೆಹಲಿಗೆ ತೆರಳಿ ಚುನಾವಣಾ ಆಯೋಗವನ್ನು ಭೇಟಿ ಮಾಡಿ ರಾಜ್ಯದ ಮತದಾರರ ಹಕ್ಕುಗಳನ್ನು ರಕ್ಷಿಸಲು ಹೋರಾಟ ನಡೆಸಿದ್ದರು. ಈ ಎಲ್ಲ ಪ್ರಯತ್ನಗಳ ನಡುವೆಯೂ ರಾಜ್ಯದ ಜನತೆ ಕಾಂಗ್ರೆಸ್‌ಗೆ 136 ಸ್ಥಾನಗಳನ್ನು ನೀಡಿ ಸರ್ಕಾರ ರಚಿಸಲು ಅವಕಾಶ ಮಾಡಿಕೊಟ್ಟರು" ಎಂದರು.
 
"ಕರ್ನಾಟಕ ಮಾತ್ರವಲ್ಲದೆ ಬಿಹಾರ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಹರಿಯಾಣ ಮತ್ತು ತಮಿಳುನಾಡಿನಲ್ಲಿಯೂ ಬಿಜೆಪಿ ಚುನಾವಣಾ ಆಯೋಗವನ್ನು ಬಳಸಿಕೊಂಡು ಮತದಾರರ ಹಕ್ಕುಗಳನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಆರೋಪಿಸಿದ ಅವರು, ಚುನಾವಣಾ ಆಯೋಗವು ಸಂವಿಧಾನದ ಆಶಯದಂತೆ ಕಾರ್ಯನಿರ್ವಹಿಸುವ ಬದಲು ಒಂದು ಪಕ್ಷದ ಕಾರ್ಯಕರ್ತರಂತೆ ವರ್ತಿಸುತ್ತಿದೆ" ಎಂದು ಟೀಕಿಸಿದರು.
 
"ದೆಹಲಿ ಹೋರಾಟದಲ್ಲಿ ಯುವಕ-ಯುವತಿಯರನ್ನು ನಡೆಸಿಕೊಂಡ ರೀತಿ ನಾಚಿಕೆಗೇಡಿನ ಸಂಗತಿ. ಮತಗಳ್ಳತನದ ವಿರುದ್ಧ ಹೋರಾಡುವ ಶಕ್ತಿ ದೇಶದ ಯುವಜನರಿಗಿದೆ. ಕಾಂಗ್ರೆಸ್ ಪಕ್ಷದ ಇತಿಹಾಸವೇ ದೇಶದ ಇತಿಹಾಸವಾಗಿದ್ದು, ಎಲ್ಲ ವರ್ಗದ ಜನರಿಗೂ ಸಮಾನ ಅವಕಾಶ ಮತ್ತು ನ್ಯಾಯ ಒದಗಿಸುವ ವ್ಯವಸ್ಥೆಗೆ ಕಾಂಗ್ರೆಸ್ ಬದ್ಧವಾಗಿದೆ" ಎಂದು ಹೇಳಿದರು.
 
"ವಿರೋಧ ಪಕ್ಷದ ನಾಯಕರು ಚುನಾವಣಾ ಆಯೋಗವನ್ನು ಭೇಟಿ ಮಾಡಲು ಅವಕಾಶ ನೀಡದಿರುವುದು ಪ್ರಜಾಪ್ರಭುತ್ವದ ಸ್ಥಿತಿಯನ್ನು ತೋರಿಸುತ್ತದೆ. ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಇಂಡಿಯಾ ಒಕ್ಕೂಟದ ನಾಯಕರು ಮತದಾರರ ಹಕ್ಕುಗಳ ರಕ್ಷಣೆಗೆ ಧ್ವನಿ ಎತ್ತುತ್ತಿದ್ದಾರೆ. ಚುನಾವಣಾ ಆಯೋಗವು ಮತಗಳ್ಳತನಕ್ಕೆ ಬುನಾದಿ ಹಾಕಿಕೊಡುತ್ತಿದೆ" ಎಂದು ಆರೋಪಿಸಿದರು.
 
"ಮತಗಳ್ಳತನದ ಕುರಿತು ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಸಮೀಕ್ಷೆ ನಡೆಸಿದ ಪ್ರಕಾಶ್ ರಾಜ್, ನೂರ್ ಶ್ರೀಧರ್ ಅವರ ನೇತೃತ್ವದ ತಂಡ ನೀಡಿದ ವರದಿಯು ಹಲವು ಅಕ್ರಮಗಳನ್ನು ಬಹಿರಂಗಪಡಿಸಿದೆ. ಈ ತಂಡ ನೂರಾರು ಕ್ಷೇತ್ರಗಳಿಗೆ ಭೇಟಿ ನೀಡಿ, ಪ್ರತಿ ಮತಗಟ್ಟೆಯಲ್ಲಿನ ಅನ್ಯಾಯಗಳನ್ನು ದಾಖಲಿಸಿತ್ತು. ವರದಿಯ ಆಧಾರದಲ್ಲಿ ಸರ್ಕಾರ ಎಚ್ಚೆತ್ತುಕೊಂಡು ಕ್ರಮಕ್ಕೆ ಮುಂದಾಯಿತು" ಎಂದು ತಿಳಿಸಿದರು.
 
"ಬಿಜೆಪಿ ಕಚೇರಿಯಿಂದಲೇ ಅರ್ಜಿ ನಮೂನೆ 7ನ್ನು ಮುದ್ರಿಸಿ, ಮತದಾರರ ಹೆಸರು, ಮತದಾರರ ಗುರುತಿನ ಚೀಟಿ ಸಂಖ್ಯೆ ಮತ್ತು ದೂರವಾಣಿ ಸಂಖ್ಯೆಗಳೊಂದಿಗೆ ಕ್ಷೇತ್ರಗಳ ನಾಯಕರಿಗೆ ಕಳುಹಿಸಲಾಗಿತ್ತು. ಅರ್ಜಿಯಲ್ಲಿ ಕೇವಲ ಅರ್ಜಿ ಸಲ್ಲಿಸುವವರ ಹೆಸರನ್ನು ಭರ್ತಿ ಮಾಡುವ ವ್ಯವಸ್ಥೆ ಮಾಡಲಾಗಿತ್ತು. ಈ ಮೂಲಕ ಪ್ರತಿ ಕ್ಷೇತ್ರದಲ್ಲಿ 10ರಿಂದ 20 ಸಾವಿರ ಪರಿಶಿಷ್ಟ ಪಂಗಡದವರು, ಹಿಂದುಳಿದ ವರ್ಗದವರು ಮತ್ತು ಅಲ್ಪಸಂಖ್ಯಾತರ ಮತಗಳನ್ನು ಅಳಿಸಲು ಸಂಚು ರೂಪಿಸಲಾಗಿತ್ತು" ಎಂದು ಹೇಳಿದರು.
 
"ಕಲಬುರ್ಗಿ, ವಿಜಯಪುರ, ಬೆಂಗಳೂರಿನ ಸೌಮ್ಯಾ ರೆಡ್ಡಿ ಅವರ ಕ್ಷೇತ್ರ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಾವಿರಾರು ಮತಗಳನ್ನು ತೆಗೆದುಹಾಕಲು ಪ್ರಯತ್ನಿಸಲಾಗಿತ್ತು. ಈ ಅಕ್ರಮದ ಬಗ್ಗೆ ಮುನ್ಸೂಚನೆ ನೀಡಿದ ಕಾರ್ಯಕರ್ತರ ವರದಿಯಿಂದ ದೊಡ್ಡ ಅನಾಹುತ ತಪ್ಪಿತು" ಎಂದು ಹೇಳಿದರು.
 
"ಫಾರ್ಮ್ ನಂಬರ್ 7 ರ ಅಕ್ರಮದ ವಿರುದ್ದ ಸಚಿವ ಸಂಪುಟದ ಸದಸ್ಯರ ಜೊತೆ ಹೋಗಿ ಚುನಾವಣಾ ಆಯೋಗದ ಕಚೇರಿಗೆ ತೆರಳಿ, ಮತದಾರರ ಹಕ್ಕುಗಳನ್ನು ರಕ್ಷಿಸುವಂತೆ ನಾನು ಪ್ರತಿಭಟನೆ ನಡೆಸಿದೆ. ಕ್ರಮ ಕೈಗೊಳ್ಳುವವರೆಗೂ ವಾಪಸ್ ಹೋಗುವುದಿಲ್ಲ, ಇಲ್ಲೇ ಮಲಗುತ್ತೇನೆ" ಎಂದು ಪಟ್ಟು ಹಿಡಿದ ನಂತರ ಚುನಾವಣಾ ಆಯೋಗವು ಕೊನೆಗೆ ಅರ್ಜಿ ನಮೂನೆ 7ರ ಮೂಲಕ ಬಂದ ಮನವಿಗಳನ್ನು ಪರಿಗಣಿಸಬಾರದು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿತು. ಹೊಸ ಮತದಾರರನ್ನು ಸೇರ್ಪಡೆಗೊಳಿಸಲು ಅವಕಾಶ ಕಲ್ಪಿಸುವಂತೆ ಮತ್ತು ದುರುಪಯೋಗದ ಬಗ್ಗೆ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚಿಸಲಾಯಿತು" ಎಂದರು.
 
"ಅರ್ಜಿಗಳ ದುರುಪಯೋಗದ ಬಗ್ಗೆ ಪ್ರಕರಣ ದಾಖಲಾದ ಬಳಿಕ ಬಿಜೆಪಿ ನಾಯಕರು ತಮ್ಮ ಕಾರ್ಯಕರ್ತರನ್ನು ರಕ್ಷಿಸಲು ಚುನಾವಣಾ ಆಯೋಗ ಮತ್ತು ಪೊಲೀಸ್ ಅಧಿಕಾರಿಗಳ ಮುಂದೆ ಹೋಗುತ್ತಿದ್ದಾರೆ. ಮತದಾರರ ಹಕ್ಕನ್ನು ಕಸಿದುಕೊಳ್ಳುವ ಪ್ರಯತ್ನವು ಪ್ರಜಾಪ್ರಭುತ್ವದ ಮೇಲಿನ ದಾಳಿಯಾಗಿದೆ" ಎಂದು ಹೇಳಿದರು.
 
"ಮತದಾನದ ಹಕ್ಕನ್ನು ಕಸಿದುಕೊಳ್ಳುವುದು ಪ್ರಜಾಪ್ರಭುತ್ವದ ಕೊಲೆಗೆ ಸಮಾನ. ಮತಗಳ್ಳತನಕ್ಕೂ ಕೊಲೆ ಯತ್ನದಂತಹ ಗಂಭೀರ ಅಪರಾಧಗಳಿಗೂ ವ್ಯತ್ಯಾಸವಿಲ್ಲ. ಬಿಹಾರದಲ್ಲಿ 65 ಲಕ್ಷ, ಕರ್ನಾಟಕದಲ್ಲಿ ಸುಮಾರು 1 ಕೋಟಿ, ಹರಿಯಾಣದಲ್ಲಿ 25 ಲಕ್ಷ ಮತಗಳ ಅಳಿಸಲಾಗಿದೆ. ಆದರೂ ಕೇಂದ್ರ ಸರ್ಕಾರ ಈ ವೈಫಲ್ಯವನ್ನು ಒಪ್ಪಿಕೊಳ್ಳುತ್ತಿಲ್ಲ. ಎಸ್‌ಐಆರ್ ಪ್ರಕ್ರಿಯೆಯಿಂದಲೂ ನ್ಯಾಯ ದೊರೆಯುತ್ತಿಲ್ಲ" ಎಂದು ಟೀಕಿಸಿದರು.
 
 
"ಎಸ್ಐಆರ್ (ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ) ಪ್ರಕ್ರಿಯೆ ನಡೆಯುತ್ತಿರುವ ರೀತಿಯನ್ನು ನಾವು ಒಪ್ಪುವುದಿಲ್ಲ. ಈ ವಿಚಾರದಲ್ಲಿ ನಮ್ಮ ನಿಲುವು ಸ್ಪಷ್ಟ ಹಾಗೂ ದೃಢವಾಗಿದೆ. ಮತದಾರರ ಪಟ್ಟಿಯಿಂದ ಕೈಬಿಟ್ಟಿರುವ ಮತದಾರರ ಹೆಸರುಗಳನ್ನು, ಮೃತಪಟ್ಟವರನ್ನು ಹೊರತುಪಡಿಸಿ, ಮತ್ತೆ ಸೇರ್ಪಡೆ ಮಾಡಬೇಕು ಎಂಬುದು ನಮ್ಮ ಪ್ರಮುಖ ಬೇಡಿಕೆಯಾಗಿದೆ" ಎಂದು  ತಿಳಿಸಿದರು
 
"ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವ ಎಲ್ಲರಿಗೂ ನ್ಯಾಯ ಒದಗಿಸಬೇಕು. ಈ ನಿಟ್ಟಿನಲ್ಲಿ ಈಗಾಗಲೇ ನಮ್ಮ ನಾಯಕರು ದೃಢ ನಿಲುವು ತೆಗೆದುಕೊಂಡಿದ್ದಾರೆ. ಪ್ರತಿಯೊಬ್ಬ ಅರ್ಹ ಮತದಾರನಿಗೂ ನ್ಯಾಯ ಸಿಗಬೇಕು ಎಂಬುದು ನಮ್ಮ ಒತ್ತಾಯವಾಗಿದೆ" ಎಂದರು. "ಎಸ್ಐಆರ್ ಪ್ರಕ್ರಿಯೆಯಲ್ಲಿ ಅನ್ಯಾಯಕ್ಕೊಳಗಾದ ಮತದಾರರಿಗೆ ನ್ಯಾಯ ದೊರೆಯುವವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ. ನಮ್ಮ ಬೇಡಿಕೆ ಈಡೇರುವವರೆಗೂ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ" ಎಂದು ಹೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಎಸ್‌ಐಆರ್ ರದ್ದುಗೊಳಿಸಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕು: ಸಿದ್ದರಾಮಯ್ಯ ಆಗ್ರಹ