ಬೆಂಗಳೂರು : ದೋಸ್ತಿ ಸರ್ಕಾರದಲ್ಲಿ ಇದೀಗ ಮತ್ತೆ ಅಸಮಾಧಾನ ಭುಗಿಲೆದಿದ್ದು, ಜೆಡಿಎಸ್ ನ ಸೋದರಜೋಡಿಯ ಮೇಲೆ ಇದೀಗ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ.
'ಮುಂದಿನ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್‌ನ್ನು 12 ಸ್ಥಾನಗಳಲ್ಲಿ ಗೆಲ್ಲಿಸಿಕೊಡಿ' ಎಂದು ತಮ್ಮ ಕಾರ್ಯಕರ್ತರಿಗೆ ಕುಮಾರಸ್ವಾಮಿ ಕರೆ ನೀಡಿದ ಬಗ್ಗೆ ಅಸಮಾಧಾನ ಹೊರಹಾಕಿರುವ ದಿನೇಶ್ ಗುಂಡೂರಾವ್, ' ಜೆಡಿಎಸ್‌ಗೆ 12 ಸ್ಥಾನ ಬಿಟ್ಟುಕೊಡುವ ಕುರಿತು ಎಲ್ಲೂ ಚರ್ಚೆಯಾಗಿಲ್ಲ. ಎಚ್.ಡಿ. ಕುಮಾರಸ್ವಾಮಿ ಅವರು ಜೆಡಿಎಸ್ ವೇದಿಕೆಯಲ್ಲಿ ಮಾತ್ರ ಚರ್ಚೆ ಮಾಡಿದ್ದಾರೆ. ಲೋಕಸಭೆ ಚುನಾವಣೆ ಸ್ಥಾನಗಳ ಹಂಚಿಕೆಗಳ ಬಗ್ಗೆ ಇನ್ನೂ ಎರಡೂ ಪಕ್ಷಗಳ ನಡುವೆ ಚರ್ಚೆಯಾಗಿಲ್ಲ. ಚರ್ಚೆಯಾಗದೆ ಅಂತಹ ವಿಚಾರಗಳ ಬಗ್ಗೆ ಬಹಿರಂಗವಾಗಿ ಹೇಳುವುದು ಬೇಡ. ಇಷ್ಟಕ್ಕೂ ಕ್ಷೇತ್ರಗಳ ಸಂಖ್ಯೆ ಮುಖ್ಯವಲ್ಲ. ಬದಲಿಗೆ ನಮಗೆ ಗೆಲ್ಲುವುದು ಮಾತ್ರ ಮುಖ್ಯ' ಎಂದು ಹೇಳಿದ್ದಾರೆ.
ಹಾಗೇ ಇನ್ನು 'ಕಾಂಗ್ರೆಸ್ ಪಕ್ಷವು ಸಂಚು ನಡೆಸಿ ದಲಿತ ನಾಯಕರಾದ ಡಾ.ಜಿ. ಪರಮೇಶ್ವರ್ ಅವರಿಂದ ಗೃಹ ಖಾತೆ ಕಸಿದುಕೊಂಡಿದೆ. ಪರಿಶಿಷ್ಟಸಮುದಾಯದ ನಾಯಕನ ಕಾಂಗ್ರೆಸ್‌ನವರೇ ಸಹಿಸದಿದ್ದರೆ ಹೇಗೆ' ಎಂಬ ಸಚಿವ ಎಚ್.ಡಿ. ರೇವಣ್ಣ ಅವರ ಹೇಳಿಕೆಗೂ ಆಕ್ರೋಶ ವ್ಯಕ್ತಪಡಿಸಿದ ದಿನೇಶ್, 'ಸಮ್ಮಿಶ್ರ ಸರ್ಕಾರದ ದೋಸ್ತಿ ಪಕ್ಷವಾಗಿರುವ ಕಾಂಗ್ರೆಸ್ ಬಗ್ಗೆ ಬಹಿರಂಗವಾಗಿ ಹೇಳಿಕೆ ನೀಡದಂತೆ ರೇವಣ್ಣ ಅವರಿಗೆ ಸಲಹೆ ನೀಡುತ್ತೇನೆ. ಬಹಿರಂಗವಾಗಿ ಒಂದು ಪಕ್ಷದ ಬಗ್ಗೆ ಮಾತನಾಡಬಾರದು' ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.