ಬೆಂಗಳೂರು: ವಿಧಾನಸಭೆ ಚುನಾವಣೆಗೆ ಇನ್ನು ಕೆಲವೇ ದಿನಗಳಿವೆ. ಆದರೆ ಚುನಾವಣೆಗೆ ಮೊದಲೇ ಕಾಂಗ್ರೆಸ್ ತನ್ನದೇ ಗೆಲುವು ಎಂಬ ಉತ್ಸಾಹದಲ್ಲಿ ಮೈ ಮರೆತರಾ?
ಈ ಬಾರಿಯ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೂ ಬಹುಮತ ಸಿಗುವ ಸಾಧ್ಯತೆ ಕಡಿಮೆ. ಹಾಗಾದ ಪಕ್ಷದಲ್ಲಿ ಕಾಂಗ್ರೆಸ್ ಜೆಡಿಎಸ್ ಜತೆ ಸೇರಿಕೊಂಡು ಮೈತ್ರಿ ಸರ್ಕಾರ ರಚಿಸಬಹುದು. ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಕಾಂಗ್ರೆಸ್ ಗೆ ಜೆಡಿಎಸ್ ಬೆಂಬಲ ಕೊಡಬಹುದು ಎಂದು ಲೆಕ್ಕಾಚಾರ ಹಾಕಲಾಗಿತ್ತು.
ಹಲವು ಸಮೀಕ್ಷೆಗಳು, ಜ್ಯೋತಿಷಿಗಳು, ರಾಜಕೀಯ ತಜ್ಞರೂ ಈ ಬಾರಿಯ ಚುನಾವಣೆಯಲ್ಲಿ ಜೆಡಿಎಸ್ ಅಥವಾ ಕುಮಾರಸ್ವಾಮಿ ನಿರ್ಣಾಯಕರು ಎಂದೇ ಭವಿಷ್ಯ ನುಡಿದಿದ್ದರು. ಆದರೆ ರಾಹುಲ್ ಗಾಂಧಿ ಕರಾವಳಿ ಪ್ರವಾಸ ಮಾಡಿದಾಗ ನೀಡಿದ ಹೇಳಿಕೆಯೊಂದು ಜೆಡಿಎಸ್ ನಲ್ಲಿ ಅಸಮಾಧನದ ಹೊಗೆ ಸೃಷ್ಟಿಸಿದೆ.
ಜೆಡಿಎಸ್ ನ್ನು ಟೀಂ ಬಿ ಎಂದಿದ್ದ ರಾಹುಲ್, ಆ ಪಕ್ಷವನ್ನು ಕೆಣಕಿದ್ದರು. ಇದಕ್ಕೂ ಮೊದಲು ಸಿಎಂ ಸಿದ್ದರಾಮಯ್ಯ-ಮಂಜೇಗೌಡ ನಡುವೆ ನಡೆದ ಫೋನ್ ಸಂಭಾಷಣೆಯಲ್ಲಿ ಎಚ್ ಡಿ ರೇವಣ್ಣರನ್ನು ಸೋಲಿಸುವ ಮಾತನಾಡಿದ್ದರು. ಆ ಘಟನೆಯಿಂದ ಅಸಮಾಧಾನಗೊಂಡಿದ್ದ ಜೆಡಿಎಸ್, ಇದೀಗ ರಾಜ್ಯ ಸಭೆ ಚುನಾವಣೆ ಸಂದರ್ಭದಲ್ಲಿ ತಮ್ಮ ಅಭ್ಯರ್ಥಿಯ ಸೋಲಿನಿಂದ ಮತ್ತಷ್ಟು ಕೆರಳಿದೆ. ಮತದಾನ ಮಾಡುವಾಗ ಕಾಂಗ್ರೆಸ್ ಪರವಾಗಿ ಚುನಾವಣಾಧಿಕಾರಿಗಳು ನಡೆದುಕೊಂಡರು ಎಂಬುದು ಜೆಡಿಎಸ್ ಆರೋಪ.
ರಾಜ್ಯ ಸಭೆ ಸೋಲಿನಿಂದ ಮತ್ತಷ್ಟು ಕೆರಳಿರುವ ಕುಮಾರಸ್ವಾಮಿ, ನಾವು ಬಿಜೆಪಿ ಜತೆ ಸೇರಿಕೊಂಡರೆ ಕಾಂಗ್ರೆಸ್ ಕತೆಯೇ ಬೇರೆಯಾಗುತ್ತೆ ಎಂದಿದ್ದಾರೆ. ರಾಜ್ಯ ಸಭೆ ಚುನಾವಣೆ ಸಂದರ್ಭದಲ್ಲಿಯೂ ಹೆಚ್ಚವರಿ ಮತಗಳನ್ನು ಕಾಂಗ್ರೆಸ್ ಬಳಿ ಕೇಳಿದ್ದ ಜೆಡಿಎಸ್ ಗೆ ಮುಖಭಂಗವಾಗಿತ್ತು. ಈ ಸೇಡಿನ ಕಿಚ್ಚು ಮುಂದಿನ ಚುನಾವಣೆ ಫಲಿತಾಂಶದ ಬಳಿಕವೂ ಮುಂದುವರಿದರೆ, ಅತ್ತ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಬಾರದೇ ಇದ್ದರೆ, ಕಾಂಗ್ರೆಸ್ ಗೆ ಜೆಡಿಎಸ್ ಈಗಿನ ಎಲ್ಲಾ ಕೆಚ್ಚುಗಳನ್ನು ಸೇರಿಸಿ ಒಟ್ಟಿಗೇ ತಿರುಗೇಟು ಕೊಡುವುದರಲ್ಲಿ ಸಂಶಯವಿಲ್ಲ!
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ