ಬೆಂಗಳೂರು: ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರಿಗೆ ಇದು 92ನೇ ಜನ್ಮದಿನದ ಸಂಭ್ರಮ. ಈ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಗಣ್ಯರು ಶುಭಾಶಯ ಕೋರಿದ್ದಾರೆ.
ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡರಿಗೆ ಹುಟ್ಟುಹಬ್ಬದ ಶುಭಾಶಯಗಳು. ಸಾರ್ವಜನಿಕ ಸೇವೆಗಾಗಿ ದೇವೇಗೌಡರು ಎಲ್ಲೆಡೆ ಗೌರವಾನ್ವಿತರಾಗಿದ್ದಾರೆ. ಹಲವಾರು ವಿಷಯಗಳ ಕುರಿತು ಅವರ ಬುದ್ಧಿವಂತಿಕೆ ಮತ್ತು ಒಳನೋಟಗಳು ಹೆಚ್ಚಿನ ಶಕ್ತಿಯ ಮೂಲವಾಗಿದೆ. ಅವರಿಗೆ ದೀರ್ಘ ಮತ್ತು ಆರೋಗ್ಯಕರ ಜೀವನ ಕರುಣಿಸಲಿ ಎಂದು ಹಾರೈಸುತ್ತೇನೆಂದು ಎಕ್ಸ್‌ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಪೋಸ್ಟ್ ಮಾಡಿದ್ದಾರೆ.
ನಾಡಿನ ಹಿರಿಯ ರಾಜಕಾರಣಿ, ಮಾಜಿ ಪ್ರಧಾನಿಗಳು ಆದ ಎಚ್‌ಡಿ ದೇವೇಗೌಡ ಅವರಿಗೆ ಜನ್ಮದಿನದ ಶುಭಾಶಯಗಳು. ಮತ್ತಷ್ಟು ಕಾಲ ತಮಗೆ ಉತ್ತಮ ಆರೋಗ್ಯ ಮತ್ತು ಆಯಸ್ಸನ್ನು ದೇವರು ಕರುಣಿಸಲೆಂದು ಹಾರೈಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಎಕ್ಸ್‌ನಲ್ಲಿ ಪೋಸ್ಟ್ ಮಾಡಿ ಶುಭ ಕೋರಿದ್ದಾರೆ.
ನನ್ನ ಪೂಜ್ಯ ತಂದೆಯವರು, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಮಾಜಿ ಪ್ರಧಾನಮಂತ್ರಿಗಳೂ ಆಗಿರುವ ಮಣ್ಣಿನಮಗ ಹೆಚ್‌ಡಿ ದೇವೇಗೌಡ ಅವರಿಗೆ ಜನ್ಮದಿನದ ಭಕ್ತಿಪೂರ್ವಕ ಶುಭಾಶಯಗಳು. ನನ್ನ ಶಕ್ತಿ, ನನ್ನ ಧೈರ್ಯ, ನನ್ನ ಸ್ಫೂರ್ತಿ ನನ್ನ ತಂದೆಯವರೇ ಆಗಿದ್ದಾರೆ. ಅವರ ಸಂಘರ್ಷದ ಹಾದಿ, ಸಾಧನೆ, ಸೇವಾ ತತ್ಪರತೆ ನನ್ನ ಮೇಲೆ ಅಗಾಧ ಪ್ರಭಾವ ಬೀರಿದೆ. ಇಡೀ ಬದುಕನ್ನು ರಾಷ್ಟ್ರ ಸೇವೆಗೆ ಸಮರ್ಪಿಸಿರುವ ಈ ಮಹಾನ್ ನಾಯಕನ ಕುಡಿಯಾಗಿ ಹುಟ್ಟಿರುವುದು ನನ್ನ ಜನ್ಮಜನ್ಮದ ಸುಕೃತ ಎಂದು ಕೇಂದ್ರ ಸಚಿವೂ ಆಗಿರುವ ಹೆಚ್.ಡಿ. ಕುಮಾರಸ್ವಾಮಿ ಎಕ್ಸ್‌ನಲ್ಲಿ ತಿಳಿಸಿದ್ದಾರೆ.
ವಿಧಾನಸಭೆ ಪ್ರತಿಪಕ್ಷ ನಾಯಕ ಆರ್ ಅಶೋಕ್ ಪದ್ಮನಾಭ ನಗರದ ನಿವಾಸದಲ್ಲಿ ದೇವೇಗೌಡರನ್ನು ಭೇಟಿ ಮಾಡಿ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.