ಜನರಿಗೆ ಮೋಸ ಮಾಡಿದ್ದ ಕಂಪನಿ ಬಳಿ 1 ಕೋಟಿ ಲಂಚಕ್ಕೆ ಬೇಡಿಕೆ ಇಟ್ಟ ಆರೋಪದ ಮೇಲೆ ಸಿಸಿಬಿಯ ಸಬ್ಇನ್ಸ್ಪೆಕ್ಟರ್ ಮತ್ತು ಮುಖ್ಯಪೇದೆಯನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
ಸಿಸಿಬಿಯ ಸಂಘಟಿತ ಅಪರಾಧ ದಳದ(ಓಸಿಡ್ಲ್ಯೂ)ಸಬ್ಇನ್ಸ್ಪೆಕ್ಟರ್ ಪ್ರಕಾಶ್, ಮುಖ್ಯಪೇದೆ ಸತೀಶ್ ಅವರನ್ನು ಅಮಾನತ್ತುಗೊಳಿಸಿ ನಗರ ಪೊಲೀಸ್ ಆಯುಕ್ತ ಸುನೀಲ್ ಕುಮಾರ್ ಆದೇಶ ಹೊರಡಿಸಿದ್ದಾರೆ.
ತಿಂಗಳಿಗೆ ಅಧಿಕ ಲಾಭಾಂಶ ನೀಡುವುದಾಗಿ ಸಾರ್ವಜನಿಕರಿಂದ ಸುಮಾರು 65 ಕೋಟಿ ಹೂಡಿಕೆ ಮಾಡಿಸಿಕೊಂಡಿದ್ದ ಜಯನಗರದಲ್ಲಿ ಕಚೇರಿ ಹೊಂದಿದ್ದ ಎಐಎಂಎಂಎಸ್ ಕಂಪನಿ ಸಾವಿರಾರು ಮಂದಿಗೆ ವಂಚನೆ ನಡೆಸಿತ್ತು.
ಈ ಸಂಬಂಧ ಬಂದ ದೂರುಗಳಿಂದ ಮಾಹಿತಿ ಪಡೆದು ವಿಚಾರಣೆ ನೆಪದಲ್ಲಿ ಎಐಎಂಎಂಎಸ್ ಕಂಪನಿಯವರ ಬಳಿ ಸಬ್ ಇನ್ಸ್ಪೆಕ್ಟರ್ ಪ್ರಕಾಶ್, ಮುಖ್ಯಪೇದೆ ಸತೀಶ್ 1 ಕೋಟಿಗೆ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಇದರಲ್ಲಿ 35 ಲಕ್ಷ ಹಣ ಪಡೆದಿದ್ದರು ಎಂಬ ಆರೋಪ ಕೇಳಿ ಬಂದಿತ್ತು.
ಆರೋಪವನ್ನು ಗಂಭೀರವಾಗಿ ಪರಿಗಣಿಸಿ ಸತ್ಯಾ ಸತ್ಯತೆ ಪರಿಶೀಲಿಸಿದ ಡಿಸಿಪಿ ಗಿರೀಶ್ ಅವರಿಗೆ ಲಂಚಕ್ಕೆ ಬೇಡಿಕೆ ಇಟ್ಟಿರುವುದು ಸಾಬೀತಾಗಿದ್ದರಿಂದ ನಗರ ಪೊಲೀಸ್ ಆಯುಕ್ತ ಸುನೀಲ್ ಕುಮಾರ್ ಅವರಿಗೆ ಕ್ರಮ ಕೈಗೊಳ್ಳುವಂತೆ ವರದಿ ಸಲ್ಲಿಸಿದ್ದರು. ವರದಿ ಆಧರಿಸಿ ಇಬ್ಬರನ್ನ ಅಮಾನತು ಮಾಡಿ ನಗರ ಪೊಲೀಸ್ ಆಯುಕ್ತ ಸುನೀಲ್ ಕುಮಾರ್ ಆದೇಶ ಹೊರಡಿಸಿದ್ದಾರೆ.