ಬೆಂಗಳೂರು: ಕರ್ನಾಟಕ ಬಿಜೆಪಿ ಘಟಕ ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಬೆಂಗಳೂರಿನ ವಿಶೇಷ ನ್ಯಾಯಾಲಯವು ಶುಕ್ರವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಜಾಮೀನು ಮಂಜೂರು ಮಾಡಿದೆ.
ಕಾಂಗ್ರೆಸ್ ಮುಖಂಡ ಡಿಕೆ ಸುರೇಶ್ ಅವರ ಶ್ಯೂರಿಟಿ ಮೇರೆಗೆ ಜಾಮೀನು ಮಂಜೂರು ಮಾಡಲಾಗಿದೆ. ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ಜುಲೈ 30 ಕ್ಕೆ ಮುಂದೂಡಿದೆ.
2023ರ ರಾಜ್ಯ ವಿಧಾನಸಭಾ ಚುನಾವಣೆಗೆ ಮುನ್ನ ಸ್ಥಳೀಯ ಪತ್ರಿಕೆಗಳಲ್ಲಿನ ಜಾಹೀರಾತುಗಳು ಮತ್ತು ಕಾಂಗ್ರೆಸ್‌ನ ಸುಳ್ಳು ಪ್ರಚಾರ ಬಿಜೆಪಿಯ ಇಮೇಜ್‌ಗೆ ಧಕ್ಕೆ ತಂದಿದೆ ಎಂದು ದೂರಿನಲ್ಲಿ ಬಿಜೆಪಿ ಆರೋಪಿಸಿದೆ.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ), ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಪ್ರಕರಣ ದಾಖಲಾಗಿದೆ.
ಇದಕ್ಕೂ ಮುನ್ನ ಜೂನ್ 1ರಂದು ವಿಚಾರಣೆಗೆ ಹಾಜರಾದ ಸಿದ್ದರಾಮಯ್ಯ ಮತ್ತು ಶಿವಕುಮಾರ್ ಅವರಿಗೆ ನ್ಯಾಯಾಲಯ ಜಾಮೀನು ನೀಡಿತ್ತು. ಶಿವಕುಮಾರ್ ಕರ್ನಾಟಕ ಬಿಜೆಪಿ ಘಟಕ ದಾಖಲಿಸಿರುವ ಮಾನನಷ್ಟ ಮೊಕದ್ದಮೆಯನ್ನು ಬೋಗಸ್ ಕೇಸ್ ಎಂದು ಕರೆದಿದ್ದಾರೆ.
ಬಿಜೆಪಿ ನನ್ನ ವಿರುದ್ಧ, ಸಿಎಂ ಸಿದ್ದರಾಮಯ್ಯ ಮತ್ತು ರಾಹುಲ್ ಗಾಂಧಿ ವಿರುದ್ಧ ಸುಳ್ಳು, ಬೋಗಸ್ ಪ್ರಕರಣ ದಾಖಲಿಸಿದ್ದು, ಸಮನ್ಸ್ ಜಾರಿ ಮಾಡಲಾಗಿದೆ ಎಂದು ಎಎನ್‌ಐಗೆ ತಿಳಿಸಿದ್ದಾರೆ.<>