Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ರೈತರಿಗೆ, ಗ್ರಾಹಕರಿಗೆ ತೊಂದರೆಯಾಗದಂತೆ ಕೆಎಂಎಫ್‌ನಿಂದ ನಿರ್ಧಾರ: ಸಿಎಂ ಸಿದ್ದರಾಮಯ್ಯ

siddaramaiah

Sampriya

ಬೆಂಗಳೂರು , ಮಂಗಳವಾರ, 25 ಜೂನ್ 2024 (16:35 IST)
ಬೆಂಗಳೂರು: ಹೆಚ್ಚುವರಿಯಾಗಿ ಉತ್ಪಾದನೆಯಾಗುತ್ತಿರುವ ಹಾಲನ್ನು ರೈತರಿಂದ ಖರೀದಿಸಿ, ಗ್ರಾಹಕರಿಗೂ ಹೊರೆಯಾಗದ ರೀತಿಯಲ್ಲಿ ಮಾರಾಟ ಮಾಡುವ ಸಲುವಾಗಿ ಕೆ.ಎಂ.ಎಫ್‌ ಸಂಸ್ಥೆ ಹಾಲಿನ ದರದಲ್ಲಿ ಏರಿಕೆ ಮಾಡುವ ನಿರ್ಧಾರ ಕೈಗೊಂಡಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಈ ಬಗ್ಗೆ ಎಕ್ಸ್‌ನಲ್ಲಿ ಬರೆದುಕೊಂಡಿರುವ ಅವರು,  ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ರಾಜ್ಯದಲ್ಲಿ ಈ ಬಾರಿ ಹಾಲಿನ ಉತ್ಪಾದನೆ ಶೇ.15 ಹೆಚ್ಚಳವಾಗಿದೆ. ಹಿಂದಿನ ವರ್ಷಗಳಲ್ಲಿ ಈ ವೇಳೆಗೆ ನಿತ್ಯ ಸರಾಸರಿ 90 ಲಕ್ಷ ಲೀಟರ್‌ ಉತ್ಪಾದನೆಯಾಗುತ್ತಿದ್ದ ಹಾಲಿನ ಪ್ರಮಾಣ ಈ ಬಾರಿ ಸರಾಸರಿ 99 ಲಕ್ಷ ಲೀಟರ್‌ ಗೆ ಏರಿಕೆಯಾಗಿದೆ. ಹೀಗೆ ಹೆಚ್ಚುವರಿಯಾಗಿ ಉತ್ಪಾದನೆಯಾಗುವ ಹಾಲನ್ನು ರೈತರಿಂದ ಖರೀದಿ ಮಾಡಬೇಕು, ಯಾವುದೇ ಕಾರಣಕ್ಕೂ ಅವರಿಂದ ಹಾಲು ಪಡೆಯಲು ನಿರಾಕರಿಸಬಾರದು ಎಂಬ ಸದುದ್ದೇಶದಿಂದ ಒಂದು ಲೀಟರ್‌ ಹಾಲಿನ ಪ್ಯಾಕೇಟಿಗೆ ಹೆಚ್ಚುವರಿಯಾಗಿ 50 ಮಿ.ಲೀ ಹಾಲನ್ನು ಸೇರಿಸಿ, ಈ ಹೆಚ್ಚುವರಿ ಹಾಲಿನ ಬೆಲೆ 2 ರೂಪಾಯಿಯನ್ನು ಮಾತ್ರ ಗ್ರಾಹಕರಿಂದ ಸಂಗ್ರಹಿಸಲಾಗುತ್ತಿದೆ. ಹಾಲಿನ ಬೆಲೆಯಲ್ಲಿ ಯಾವುದೇ ಹೆಚ್ಚಳವಾಗಿರುವುದಿಲ್ಲ.

ಈ ವರೆಗೆ 1,000 ಮಿ.ಲೀ ಹಾಲಿಗೆ ರೂ.42 ಹಾಗೂ 500 ಮಿ.ಲೀ ಹಾಲಿಗೆ ರೂ.22 ದರವನ್ನು ನಿಗದಿಪಡಿಸಲಾಗಿತ್ತು, ಇನ್ನು ಮುಂದೆ 1,050 ಮಿ.ಲೀ ಹಾಗೂ 550 ಮಿ.ಲೀ ಹಾಲಿನ ಪ್ಯಾಕೇಟ್‌ ಗಳನ್ನು ಮಾರಾಟ ಮಾಡಲಾಗುತ್ತಿದ್ದು, ಅದಕ್ಕೆ ಕ್ರಮವಾಗಿ ರೂ.44 ಹಾಗೂ ರೂ.24 ದರ ನಿಗದಿಪಡಿಸಲಾಗುತ್ತದೆ. ಇದು ನಾಡಿನ ಲಕ್ಷಾಂತರ ಹೈನುಗಾರರ ಹಿತದೃಷ್ಟಿಯಿಂದ ಕೆ.ಎಂ.ಎಫ್‌ ಸಂಸ್ಥೆಯು ತೆಗೆದುಕೊಂಡ ನಿರ್ಣಯವಾಗಿದ್ದು, ಹೆಚ್ಚುವರಿಯಾಗಿ ಉದ್ಪಾದನೆಯಾಗುತ್ತಿರುವ ಹಾಲನ್ನು ಗ್ರಾಹಕರಿಗೆ ಹೊರೆಯಾಗದ ರೀತಿಯಲ್ಲಿ ತಲುಪಿಸುವ ಸದುದ್ದೇಶವನ್ನು ಕೂಡ ಇದು ಹೊಂದಿದೆ.

ನಮ್ಮ ಸರ್ಕಾರ ಅಧಿಕಾರಕ್ಕೆ ಬರುವ ವೇಳೆ ರಾಜ್ಯದಲ್ಲಿ ನಿತ್ಯ ಸರಾಸರಿ 72 ಲಕ್ಷ ಲೀಟರ್‌ ಗಳಷ್ಟು ಹಾಲು ಸಂಗ್ರಹವಾಗುತ್ತಿತ್ತು. ಈ ಹಿಂದೆ ಹಾಲಿನ ಬೆಲೆಯಲ್ಲಿ ರೂ.3 ಹೆಚ್ಚಳ ಮಾಡಿ ಆ ಹೆಚ್ಚುವರಿ ಹಣವನ್ನು ರೈತರಿಗೆ ನೇರವಾಗಿ ವರ್ಗಾಯಿಸುವ ಪ್ರೋತ್ಸಾಹದಾಯಕ ಕ್ರಮ ಕೈಗೊಂಡಿದ್ದರಿಂದ ಹೈನೋದ್ಯಮವು ಹಿಂದಿಗಿಂತ ಲಾಭ ತಂದುಕೊಡುವ ಉದ್ಯೋಗವಾಯಿತು. ಜೊತೆಗೆ ಈ ಬಾರಿ ಉತ್ತಮ ಮಳೆಯಾಗಿರುವುದರಿಂದ ಜಾನುವಾರುಗಳಿಗೆ ಹಸಿರು ಮೇವು ಲಭ್ಯವಾಗುತ್ತಿದೆ. ಈ ಎರಡು ಕಾರಣಗಳಿಂದಾಗಿ ರಾಜ್ಯದಲ್ಲಿ ಹಾಲಿನ ಉತ್ಪಾದನೆ ಇಂದು ನಿತ್ಯ ಸರಿಸುಮಾರು 1 ಕೋಟಿ ಲೀಟರ್‌ ತಲುಪುವ ಹಂತಕ್ಕೆ ಬಂದಿದೆ.

ಈಗಾಗಲೇ ಗರಿಷ್ಟ ಪ್ರಮಾಣದ ಹಾಲನ್ನು ಹಾಲಿನ ಪೌಡರ್‌ ತಯಾರಿಕೆ ಮಾಡುವ ಉದ್ದೇಶಕ್ಕೆ ಬಳಕೆ ಮಾಡಲಾಗುತ್ತಿದೆ. ನಿತ್ಯ ಸುಮಾರು 30 ಲಕ್ಷ ಲೀಟರ್‌ ಹಾಲು ಪೌಡರ್‌ ತಯಾರಿಕೆಗಾಗಿ ಬಳಸಲ್ಪಡುತ್ತಿದ್ದು, 250 ಮೆಟ್ರಿಕ್‌ ಟನ್‌ ಹಾಲಿನ ಪೌಡರ್‌ ತಯಾರಿಸಲಾಗುತ್ತಿದೆ. ಇದು ಹಾಲಿನ ಪೌಡರ್‌ ಗೆ ಇರುವ ಬೇಡಿಕೆಗೆ ಅನುಗುಣವಾಗಿದೆ.

ಈಗ ಹೆಚ್ಚುವರಿಯಾಗಿ ಉತ್ಪಾದನೆಯಾಗುತ್ತಿರುವ ಹಾಲನ್ನು ರೈತರಿಂದ ಖರೀದಿಸಿ, ಗ್ರಾಹಕರಿಗೂ ಹೊರೆಯಾಗದ ರೀತಿಯಲ್ಲಿ ಮಾರಾಟ ಮಾಡುವ ಸಲುವಾಗಿ ಕೆ.ಎಂ.ಎಫ್‌ ಸಂಸ್ಥೆ ಈ ನಿರ್ಧಾರ ಕೈಗೊಂಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತವಲ್ಲ, ಪ್ರಮಾಣವಚನ ಸ್ವೀಕರಿಸುವಾಗ ಪ್ಯಾಲೆಸ್ತೀನ್ ಗೆ ಜೈಕಾರ ಹಾಕಿದ ಅಸಾವುದ್ದೀನ್ ಓವೈಸಿ