ಮಹತ್ವದ ಬೆಳವಣಿಯೊಂದರಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತವರು ಜಿಲ್ಲೆಯ ಮೇಲೆ ಡಿಸಿಎಂ ಕಣ್ಣು ಹಾಕುತ್ತಿದ್ದಾರೆ ಅನ್ನೋ ಮಾತುಗಳು ಕೇಳಿಬರಲಾರಂಭಿಸಿವೆ.
ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾಗಿದ್ದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಹುಟ್ಟೂರು, ಬಿಡದಿ ಹೋಬಳಿಯ ಬಾಣಂದೂರನ್ನು ಪ್ರೇಕ್ಷಣೀಯ ತಾಣವಾಗಿ ಅಭಿವೃದ್ಧಿಪಡಿಸಲು ಸರ್ಕಾರ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಯೋಜನೆಯನ್ನು ಮರುವಿನ್ಯಾಸಗೊಳಿಸುವಂತೆ ಗುತ್ತಿಗೆ ಪಡೆದಿರುವ ಖಾಸಗಿ ಸಂಸ್ಥೆಗೆ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಸೂಚಿಸಿದ್ದಾರೆ.
ಬಾಣಂದೂರನ್ನು ಸಾಂಸ್ಕೃತಿಕ ಹಾಗೂ ಪಾರಂಪರಿಕ ತಾಣವಾಗಿ ಅಭಿವೃದ್ಧಿಪಡಿಸುವ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗುತ್ತಿಗೆ ಸಂಸ್ಥೆ ಮುಖ್ಯಸ್ಥರ ಜತೆ ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಸುದೀರ್ಘ ಚರ್ಚೆ ನಡೆಸಿದರು.
ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಹುಟ್ಟೂರಿನಲ್ಲಿ ಸಾಂಸ್ಕೃತಿಕ ಹಾಗೂ ಪಾರಂಪರಿಕ ಕೇಂದ್ರ ಅಭಿವೃದ್ಧಿ ಪಡಿಸುವ ಕುರಿತು ಮತ್ತು ವೀರಾಪುರದಲ್ಲಿ ನಿರ್ಮಾಣಗೊಳ್ಳಲಿರುವ ಶ್ರೀ ಶಿವಕುಮಾರ ಸ್ವಾಮೀಜಿಯವರ ಪ್ರತಿಮೆ, ಮ್ಯೂಸಿಯಂ ನಿರ್ಮಾಣ ಹಾಗೂ ಸಂಬಂಧ ಸಭೆಯಲ್ಲಿ ಚರ್ಚಿಸಲಾಯಿತು.
ಬಾಣಂದೂರಿನ ಪಾರಂಪರಿಕ ಕೇಂದ್ರದ ಪರಿಕಲ್ಪನೆ, ವಿನ್ಯಾಸ ಮಾಡುತ್ತಿರುವ ಆರ್ ಆರ್ ಇನ್ಫ್ರಾಸ್ಟ್ರಕ್ಚರ್ ಸಂಸ್ಥೆಯ ವರದಿ ಪರಿಶೀಲಿಸಿದ ಡಾ. ಅಶ್ವತ್ಥನಾರಾಯಣ, ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಸ್ವಾಮೀಜಿ ಹಾಗೂ ಸಾರ್ವಜನಿಕರ ಜತೆ ಈ ಸಂಬಂಧ ಸಮಾಲೋಚನೆ ನಡೆಸಿ ಸೂಕ್ತ ಬದಲಾವಣೆ ಮಾಡಿಕೊಳ್ಳಲು ಸೂಚಿಸಿದರು.
ರಾಜ್ಯದ ಎಲ್ಲ ಭಾಗಗಳ ಜನರು ಭೇಟಿ ನೀಡುವ ತಾಣವಾಗಿ ಬಾಣಂದೂರು ಅಭಿವೃದ್ಧಿ ಆಗಬೇಕು. ಗ್ರಂಥಾಲಯ, ಸಭಾಂಗಣ, ಮ್ಯೂಸಿಯಂ ಸೇರಿದಂತೆ ಹಲವು ಆಕರ್ಷಣೆಗಳು ಅಲ್ಲಿರಬೇಕು. ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಪೂರ್ವಜರ ಮನೆಯ ಮೂಲ ಸ್ವರೂಪ ಮರುಸೃಷ್ಟಿ ಮುಂತಾದ ಯೋಜನೆಗಳ ಮೂಲಕ ಬಾಣಂದೂರನ್ನು ಪ್ರೇಕ್ಷಣೀಯ ಸ್ಥಳವನ್ನಾಗಿ ಅಭಿವೃದ್ಧಿಪಡಿಸಲು ಆರ್‌ಆರ್ ಇನ್ಫ್ರಾಸ್ಟ್ರಕ್ಚರ್‌ನ ಮುಖ್ಯಸ್ಥರಿಗೆ ಸಚಿವರು ಸಲಹೆ ನೀಡಿದರು.