ಬೆಂಗಳೂರು: ಸಿಎಂ ಸಿದ್ದರಾಮಯ್ಯ ವಿರುದ್ಧ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಾಗಿದ್ದು, ತನಿಖೆ ನಡೆಸಲು ಸಿದ್ಧತೆಗಳಾಗುತ್ತಿರುವ ಬೆನ್ನಲ್ಲೇ ಇತ್ತ ಕಾಂಗ್ರೆಸ್ ನಲ್ಲಿ ದಲಿತ ಶಾಸಕರ ಬಣ ಪ್ರತ್ಯೇಕ ಸಭೆ ನಡೆಸಿದೆ.
ಸಿಎಂ ಸಿದ್ದರಾಮಯ್ಯ ವಿರುದ್ಧ ಎಫ್ಐಆರ್ ದಾಖಲಾದ ಬೆನ್ನಲ್ಲೇ ಬಿಜೆಪಿ, ಜೆಡಿಎಸ್ ಸಿಎಂ ರಾಜೀನಾಮೆಗೆ ಒತ್ತಾಯಿಸಿದ್ದವು. ಇದೀಗ ಕಾಂಗ್ರೆಸ್ ನಲ್ಲೂ ಚಟುವಟಿಕೆ ಗರಿಗೆದರಿವೆ. ಸಿದ್ದರಾಮಯ್ಯ ವಿರೋಧಿ ಬಣವೊಂದು ಪಕ್ಷದೊಳಗೇ ಸೃಷ್ಟಿಯಾಗುತ್ತಿದೆ ಎನ್ನಲಾಗುತ್ತಿದೆ.
ಈ ಹಿಂದೆ ಸಿಎಂ ಬದಲಾವಣೆಗೆ ಹೇಳಿಕೆ ನೀಡುತ್ತಿದ್ದವರೇ ಈಗ ಸಿದ್ದರಾಮಯ್ಯ ನಂತರದ ಸಿಎಂ ಯಾರಾಗಬೇಕು ಎಂದು ಚರ್ಚೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಇದೇ ಸಂದರ್ಭದಲ್ಲೇ ಕೆಲವು ದಲಿತ ಶಾಸಕರು ಸಭೆ ಸೇರಿದ್ದು, ಸಿದ್ದರಾಮಯ್ಯ ವಿರುದ್ಧ ಕಳಂಕ ಬಂದಿರುವ ಹಿನ್ನಲೆಯಲ್ಲಿ ಮತ್ತೆ ದಲಿತ ಸಿಎಂ ಚರ್ಚೆ ಮುನ್ನಲೆಗೆ ಬರುವ ಸಾಧ್ಯತೆಯಿದೆ.
ಸಿಎಂ ಬದಲಾವಣೆ ಬಗ್ಗೆ ಕಾಂಗ್ರೆಸ್ ನಲ್ಲಿ ಬಹಿರಂಗ ಹೇಳಿಕೆಗಳು ಬರುತ್ತಿಲ್ಲ. ಆದರೆ ಪಕ್ಷದೊಳಗೇ ಕೆಲವರು ಮತ್ತೊಬ್ಬ ಸಿಎಂ ಆಯ್ಕೆಗೆ ಕಸರತ್ತು ನಡೆಸಿದ್ದು, ಈ ಮೂಲಕ ಸಿದ್ದರಾಮಯ್ಯ ಮೇಲೆ ಒತ್ತಡ ಹಾಕುವ ತಂತ್ರ ಮಾಡುತ್ತಿದ್ದಾರೆ ಎನ್ನಲಾಗಿದೆ. ಪ್ರಕರಣಕ್ಕೆ ಇಡಿ ಕೂಡಾ ಎಂಟರ್ ಆಗಿದ್ದು, ಸಿದ್ದರಾಮಯ್ಯ ವಿರುದ್ಧ ತನಿಖೆ ಯಾವ ದಿಕ್ಕಿಗೆ ಸಾಗಲಿದೆ ಎಂಬುದರ ಮೇಲೆ ಅವರ ಭವಿಷ್ಯ ನಿರ್ಧಾರವಾಗಲಿದೆ.