Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಖರೀದಿ ಮಾಡಲು ಕಾಂಗ್ರೆಸ್ ಶಾಸಕರು ಕತ್ತೆ, ಕುದುರೆಗಳಾ: ಸಿಟಿ ರವಿ

CT Ravi

Krishnaveni K

ಬೆಂಗಳೂರು , ಗುರುವಾರ, 14 ನವೆಂಬರ್ 2024 (16:10 IST)
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ. ಮುಖ್ಯಮಂತ್ರಿಗಳಲ್ಲಿ ಆಧಾರ ಇದ್ದರೆ ಅದನ್ನು ಸಾಕ್ಷಿಸಮೇತ ನಿರೂಪಿಸಬೇಕು ಎಂದು ವಿಧಾನಪರಿಷತ್ ಸದಸ್ಯ ಮತ್ತು  ಬಿಜೆಪಿ ನಿಕಟಪೂರ್ವ ರಾಷ್ಟೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಸವಾಲೆಸೆದರು.

ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯ ಬಿಜೆಪಿ ಮೇಲೆ ಮಾಡಿದ ಆರೋಪಕ್ಕೆ ಅವರು ಪುಣೆಯಲ್ಲಿ ಇಂದು ಪ್ರತಿಕ್ರಿಯೆ ನೀಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ. ಬಿಜೆಪಿ, 50 ಕೋಟಿ ಕೊಟ್ಟು ಶಾಸಕರನ್ನು ಖರೀದಿಸಲು ಹೊರಟಿದೆ ಎಂದು ತಿಳಿಸಿದ್ದಾರೆ. ಹಾಗಿದ್ದರೆ ನಿಮ್ಮ ಪಕ್ಷದ ಶಾಸಕರು ಅಷ್ಟೊಂದು ದುರ್ಬಲರೇ? ಖರೀದಿ ಮಾಡಲು ಕಾಂಗ್ರೆಸ್ ಶಾಸಕರು ಕುದುರೆಯೇ, ಕತ್ತೆಯೇ ಅಥವಾ ದನವೇ? ಕುದುರೆ, ಕತ್ತೆ, ದನ ಖರೀದಿಸಬಹುದು. ಬದ್ಧತೆ ಇರುವ ಶಾಸಕರನ್ನು ಖರೀದಿಸಲು ಸಾಧ್ಯವಿಲ್ಲ ಎಂದು ವಿಶ್ಲೇಷಿಸಿದರು.

ಮುಖ್ಯಮಂತ್ರಿಗಳದು ಆಧಾರ ಇಲ್ಲದ ಆರೋಪ. ಯಾರು ಖರೀದಿ ಮಾಡಲು ಪ್ರಯತ್ನಿಸಿದರು? ಯಾರನ್ನು ಖರೀದಿ ಮಾಡಲು ಪ್ರಯತ್ನಿಸಿದ್ದಾರೆ? ಯಾವಾಗ ಖರೀದಿಸಲು ಪ್ರಯತ್ನ ಮಾಡಿದ್ದಾರೆ? ಸಾಕ್ಷಿ ಇದ್ದರೆ ದೂರು ಕೊಡಿ. ಸಾಕ್ಷಿ ಇದ್ದರೆ ನ್ಯಾಯಾಲಯದ ಮುಂದೆ ಆಧಾರಸಹಿತವಾಗಿ ನಿರೂಪಿಸಿ ಎಂದು ಮುಖ್ಯಮಂತ್ರಿಗಳನ್ನು ಆಗ್ರಹಿಸಿದರು.

ಆಧಾರಸಹಿತ ನಿರೂಪಿಸದೆ ಇದ್ದಲ್ಲಿ ಸುಳ್ಳು ಆರೋಪ ಮಾಡಿದ್ದಕ್ಕೆ ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿದರು. ಕಾಂಗ್ರೆಸ್ ಪಕ್ಷದಲ್ಲಿ 137 ಶಾಸಕರಿದ್ದಾರೆ. ನಿಮ್ಮನ್ನು ಅಲುಗಾಡಿಸುವವರು ಯಾರು? ನಿಮ್ಮನ್ನು ಅಲುಗಾಡಿಸಲು ಹೊರಗಡೆ ಯಾರ ಕೈಯಿಂದಲೂ ಸಾಧ್ಯವಿಲ್ಲ. ಒಳಗಡೆ ನಿಮ್ಮ ಪಕ್ಷದ ಬಲವಾದವರು ನೇತೃತ್ವ ವಹಿಸಿ ಸರಕಾರವನ್ನು ಅಲುಗಾಡಿಸಬೇಕೇ ಹೊರತು ಇನ್ಯಾರೂ ಅಲುಗಾಡಿಸಲು ಸಾಧ್ಯವಿಲ್ಲ ಎಂದು ವಿಶ್ಲೇಷಿಸಿದರು.

ಬಿಜೆಪಿ ಇವತ್ತು ವಿಪಕ್ಷ ಸ್ಥಾನವನ್ನು ನಿರ್ವಹಿಸುತ್ತಿದೆ. ನಾವು ನಿಮ್ಮ ಪ್ರತಿನಿತ್ಯದ ಭ್ರಷ್ಟಾಚಾರದ ಹಗರಣವನ್ನು ಬಯಲಿಗೆ ಎಳೆಯುತ್ತಿದ್ದೇವೆ. ನಿಮ್ಮ ರಾಜಕೀಯ ತಪ್ಪು ನಿರ್ಧಾರಗಳ ವಿರುದ್ಧ ಜನಾಭಿಪ್ರಾಯ ರೂಪಿಸುತ್ತಿದ್ದೇವೆ. ಜನರು ಇವತ್ತು ನಿಮಗೆ ತಿರುಗಿಬಿದ್ದಿದ್ದಾರೆ ಎಂದು ಎಚ್ಚರಿಸಿದರು.
ಮುಖ್ಯಮಂತ್ರಿ ಸ್ಥಾನದಲ್ಲಿದ್ದು, ಆ ಸ್ಥಾನದ ಜವಾಬ್ದಾರಿಯನ್ನು ಮರೆತು ಕೇವಲ ಆರೋಪ ಮಾಡುವುದು ರಾಜಕೀಯಪ್ರೇರಿತ; ಬಿಜೆಪಿಯ ಮೇಲೆ ತಪ್ಪು ಅಭಿಪ್ರಾಯ ರೂಪಿಸಲು ಮಾಡುತ್ತಿರುವ ರಾಜಕೀಯ ಷಡ್ಯಂತ್ರದ ಭಾಗ ಎಂದು ಆಕ್ಷೇಪಿಸಿದರು. ನಿಮ್ಮ ಇತ್ತೀಚಿನ ನಡವಳಿಕೆಗಳನ್ನು ನೋಡಿದಾಗ ದಿನನಿತ್ಯ ಸುಳ್ಳು ಹೇಳುವುದು ನಿಮ್ಮ ರಾಜಕೀಯ ಬದುಕಿನ ಭಾಗವಾಗಿದೆ ಎಂದು ಆರೋಪಿಸಿದರು.

ಸುಳ್ಳು ಹೇಳದೆ ಇದ್ದರೆ ನಿಮಗೆ ಊಟ ಮಾಡಿದ ಅನ್ನವೂ ಜೀರ್ಣವಾಗುವುದಿಲ್ಲ; ಸುಳ್ಳು ಹೇಳದೆ ಇದ್ದರೆ ರಾತ್ರಿ ನಿದ್ದೆಯೂ ಬರುವುದಿಲ್ಲ; ಸುಳ್ಳಿನಿಂದಲೇ ನಿಮ್ಮ ರಾಜಕೀಯ ಬದುಕು ಪ್ರಾರಂಭವಾಗಿ ಸುಳ್ಳಿಂದಲೇ ನಿಮ್ಮ ದಿನಚರಿ ಮುಕ್ತಾಯ ಆಗುತ್ತದೆ ಎಂದು ಅನಿಸುತ್ತದೆ. ಆ ರೀತಿ ನೀವು ಸುಳ್ಳು ಆರೋಪವನ್ನು ನಮ್ಮ ಪಕ್ಷದ ಮೇಲೆ ಮಾಡಿದ್ದೀರಿ ಎಂದು ಆಕ್ಷೇಪ ವ್ಯಕ್ತಪಡಿಸಿದರು.
 
 
 

Share this Story:

Follow Webdunia kannada

ಮುಂದಿನ ಸುದ್ದಿ

ಮಕ್ಕಳು ಎಂದರೆ ಜವಹರ್ ಲಾಲ್ ನೆಹರೂಗೆ ಪ್ರೀತಿ ಅದಕ್ಕೇ ಚಾಚಾ ಅಂತಿದ್ರು: ಸಿದ್ದರಾಮಯ್ಯ